ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋನವಾಟ್ಲದ ಗ್ರಾಮ ಲೆಕ್ಕಾಧಿಕಾರಿ ಧರಿಯಪ್ಪ ಮಾಳಿಯನ್ನು ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ತಿಳಿಸಿದ್ದಾರೆ.
ಗೋನವಾಟ್ಲ ವ್ಯಾಪ್ತಿಯ ಹತ್ತು ಗ್ರಾಮಗಳ ರೈತರಿಗೆ ಪ್ರವಾಹ ಪರಿಹಾರ ಹಣವಾಗಿ ಹಾಕಬೇಕಿದ್ದ ಹಣವನ್ನು ತನ್ನ ಸಹೋದರನ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಲಿಖಿತ ದೂರು ಸಲ್ಲಿಸಿದ್ದರು. ಈ ಕುರಿತು ಬಳಗಾನೂರ ಉಪ ತಹಶೀಲ್ದಾರ್ ನಾಗಲಿಂಗ ಪತ್ತಾರ, ಎಫ್ಡಿಎ ಅಮರೇಶ ಅವರನ್ನು ವಿಚಾರಣೆಗೆ ನೆಮಿಸಲಾಗಿತ್ತು.
ಪ್ರಾಥಮಿಕ ವರದಿಯಲ್ಲಿ ಜಲದುರ್ಗದ ಶಿವನಗೌಡ ಭೀಮನಗೌಡ, ಜಡಿಯಪ್ಪಗೌಡ ಚಿಕ್ಕಾದಾಪುರ ಇವರ ಹೆಸರಿನ ಖಾತೆಗೆ ಹಣ ಹಾಕದೆ ಧರಿಯಪ್ಪ ಸ್ವಂತ ಖಾತೆಗೆ 46,995 ರೂ. ಜಮಾ ಮಾಡಿಕೊಂಡಿದ್ದಾರೆ. ಅದೇ ರೀತಿ ಜಲದುರ್ಗದ ಶಿವಮಲ್ಲಯ್ಯ ಸಂಗಯ್ಯ ಹಿರೇಮಠ, ಬಸವರಾಜ ಹಡಪದ, ದುರುಗಪ್ಪ ಮೆಲಗೇರಿ ಅವರ ಹೆಸರಲ್ಲಿ ಪಹಣಿ ಇದ್ದು, ಇವರಿಗೆ ಸೇರಬೇಕಾದ 46,998 ರೂ.ಗಳನ್ನು ತಮ್ಮ ಸಹೋದರ ಶಿವಾನಂದ ಮಾಳಿ ಅವರ ಖಾತೆಗೆ ಜಮಾ ಮಾಡಿಕೊಂಡಿರುವುದು ದೃಢಪಟ್ಟಿದೆ.
ಸ್ವಂತ ಖಾತೆಯಲ್ಲಿ ಹಣ ಜಮೆ ಆಗಿರುವ ಹಿನ್ನೆಲೆ ಹಾಗೂ ಅದಾವುದಕ್ಕೂ ತಕ್ಕ ಸಾಕ್ಷ್ಯಾಧಾರ ಇಲ್ಲದ ಕಾರಣದಿಂದಾಗಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಧರಿಯಪ್ಪ ಮಾಳಿ ವಿರುದ್ಧ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.