ಲಿಂಗಸಗೂರು: ಕೃಷಿ ಕ್ಷೇತ್ರದ ಚಟುವಟಿಕೆಗಳಲ್ಲಿ ಪುರುಷರನ್ನು ಮೀರಿ ಕೆಲಸ ಮಾಡುವ ಮೂಲಕ ಗ್ರಾಮೀಣ ಜನರ ಹುಬ್ಬೇರಿಸುವಂತೆ ಇಲ್ಲೊಬ್ಬ ರೈತ ಮಹಿಳೆ ಸುಂದರ ಬದುಕು ಕಟ್ಟಿಕೊಂಡಿದ್ದಾಳೆ.
ಕೃಷಿ ಚಟಯವಟಿಕೆಯಲ್ಲಿ ಜಮೀನುಗಳಲ್ಲಿ ಸ್ವತಃ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಮಹಿಳೆ ಲಕ್ಷ್ಮವ್ವ ಲಿಂಗಸುಗೂರು ತಾಲೂಕಿನ ಗುಂಡಸಾಗರ ಗ್ರಾಮದ ನಿವಾಸಿ. ಗಂಡನ ಮನೆಯವರು ಹೊರ ಹಾಕಿದರೂ ಸ್ವಾವಲಂಬಿ ಬದುಕು ಕಟ್ಟಿಕೊಂಡು ಪುರುಷರಿಗೆ ಸವಾಲು ಹಾಕುವ ರೀತಿ ಬದಕುತ್ತಿದ್ದಾರೆ.
ಇವರು ಹೊಲದಲ್ಲಿ ಮಡಿಕೆ (ರಂಟೆ), ಕುಂಟೆ, ಎಡೆ, ಕೊಯ್ಲು, ಬಿತ್ತನೆ, ರಾಶಿಯಂತ ಸಮಗ್ರ ಕೃಷಿ ಚಟುವಟಿಕೆ ನಿಭಾಯಿಸುತ್ತಾರೆ. ಸರ್ಕಾರದ ಯಾವ ಸೌಲಭ್ಯಕ್ಕೆ ಕೈ ಚಾಚದೆ, ತಾಯಿ ಜೊತೆ ಬದುಕು ಕಟ್ಟಿಕೊಂಡಿದ್ದಾರೆ.
ಚಿಕ್ಕಂದಿನಿಂದ ಕೃಷಿ ಕೆಲಸ ಮಾಡುತ್ತ ಬಂದಿರುವೆ. ಗಂಡ ದೂರವಾಗಿ, ಅಣ್ಣ ತಮ್ಮರು ಸೇರದೆ ಹೋಗಿದ್ದರು. ಆಗ ತಾಯಿ ನಂಬಿಕೊಂಡು ಇರುವ ಎರಡು ಎಕರೆ ಜಮೀನು ನಂಬಿ ಬದುಕು ಕಟ್ಟಿಕೊಂಡಿರುವೆ. ಸರ್ಕಾರದಿಂದ ಜಮೆ ಆಗುವ ಹಣ, ಇತರೆ ಸೌಲಭ್ಯ ಗೊತ್ತಿಲ್ಲ ಎಂದು ಲಕ್ಷ್ಮವ್ವ ಮುಗ್ಧತೆಯಿಂದ ಹೇಳುತ್ತಾರೆ.
ಲಕ್ಷ್ಮವ್ವ ಅವರ ತಾಯಿ ಅಮರಮ್ಮ ಮಾತನಾಡಿ, ಮಗಳ ಸಂಸಾರ ಹಾಳಾಗಿತ್ತು. ಬಡತನದಲ್ಲೂ ಮಕ್ಕಳು ಸೇರದ ಸಂಕಷ್ಟದಲ್ಲಿದ್ದ ನಾನು ಮಗಳು ಲಕ್ಷ್ಮವ್ವಳನ್ನು ಕರೆದುಕೊಂಡು ಬಂದೆ. ಗಂಡಸರನ್ನು ಮೀರಿಸುವಂತೆ ಕೃಷಿ ಕೆಲಸ ಮಾಡುತ್ತ ಸುಂದರ ಬದುಕ ಸಾಗಿಸುತ್ತಿದ್ದಾಳೆ ಎಂದು ಹರ್ಷ ಹಂಚಿಕೊಂಡರು.