ಲಿಂಗಸುಗೂರು (ರಾಯಚೂರು) : ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿರುವ ನಿರುಪಯುಕ್ತ ಟೆಲ್ಲಿಂಗ್ ಡಂಪ್ ಸ್ಥಳಾಂತರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬುಧವಾರ ಹಟ್ಟಿ ಚಿನ್ನದ ಗಣಿ ಕಂಪನಿ ಸಂಸ್ಕರಿಸಿದ ನಿರುಪಯುಕ್ತ ಟೆಲಿಂಗ್ ಡಂಪ್ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವೆ. ಕಂಪನಿ ಅಧಿಕಾರಿಗಳು ಚರ್ಚಿಸಿ ಸೂಕ್ತ ವರದಿ ಸಲ್ಲಿಸುವಂತೆ ಸೂಚಿಸಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಬಹದ್ಮಾದೂರ ಮಾತನಾಡಿ, ಚಿನ್ನದ ಗಣಿಯಲ್ಲಿ ಶತಮಾನದಿಂದ ಸಂಗ್ರಹಗೊಂಡಿರುವ 70 ಸಾವಿರ ಮೆಟ್ರಿಕ್ ಟನ್‌ಗಳಷ್ಟು ನಿರುಪಯುಕ್ತ ತ್ಯಾಜ್ಯ ಟೆಲಿಂಗ್ ಡಂಪ್ ಸಾಕಷ್ಟು ಸ್ಥಳ ಆಕ್ರಮಿಸಿಕೊಂಡಿದೆ.
ಸ್ಥಳದ ಅಭಾವ ಎದುರಾಗಿದ್ದು, ಸಂಗ್ರಹವಾಗಿರುವ ಟೆಲ್ಲಿಂಗ್ ಡಂಪ್‌ನ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುವಂತೆ ಸಮಗ್ರ ಮಾಹಿತಿ ನೀಡಿದರು. ಈ ಹಿಂದೆ ಖಾಸಗಿ ಕಂಪನಿಯೊಂದು ಟೆಲಿಂಗ್ ಡಂಪ್ ವಿಲೇವಾರಿಗೆ ಆಸಕ್ತಿ ತೋರಿಸಿತ್ತು.
ಆದರೆ, ಪರಿಸರ ಮಾಲಿನ್ಯ ಉಂಟಾಗುವ ಕಾರಣ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಹಾಗಾಗಿ, ಆ ಸಂದರ್ಭದಲ್ಲಿ ಟೆಲಿಂಗ್ ಡಂಪ್ ವಿಲೇವಾರಿಗೆ ತಡೆ ಹಿಡಿಯಲಾಗಿತ್ತು ಎಂದರು.
ಈ ವೇಳೆ ಸಂಸದರಾದ ರಾಜಾ ಅಮರೇಶ್ವರ ನಾಯಕ್, ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್, ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ವಿಶ್ವನಾಥ್ ಸೇರಿದಂತೆ ಹಟ್ಟಿ ಚಿನ್ನದ ಗಣಿ ಕಂಪನಿಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.