ರಾಯಚೂರು: ಎರಡು ಲಾರಿ ಮತ್ತು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ-ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೊಲಪಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಜರುಗಿದ್ದು, ದೇವದುರ್ಗದಿಂದ ದಾವಣಗೆರೆಗೆ ಮಕ್ಕಳ ಶಾಲಾ ಅಡ್ಮಿಷನ್ಗೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ತಂದೆ - ತಾಯಿ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದ ಕಾರಣ ತಿಂಥಣಿ ಬ್ರಿಜ್ ಕಡೆಯಿಂದ ಬಂದ ಲಾರಿ ಹಾಗೂ ಅದರ ಹಿಂದೆ ಎರಡು ಕಾರುಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ, ಹಿಂದುಗಡೆಯಿಂದ ವೇಗವಾಗಿ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಒಂದು ಕಾರು ಪಲ್ಟಿಯಾಗಿದ್ದು. ಮತ್ತೊಂದು ಕಾರು ನಜ್ಜು-ಗುಜ್ಜಾಗಿದೆ. ಹಿಂದಿನಿಂದ ಬಂದ ಸಿಮೆಂಟ್ ಟ್ಯಾಂಕರ್ ಮುಂದೆ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು, ಕಾರು ಲಾರಿಗೆ ಗುದ್ದಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಭೀಕರ ಅಪಘಾತದಲ್ಲಿ ಭುವನ್ ಮತ್ತು ಹರ್ಷಿತಾ ಎಮಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇವರು ದೇವದುರ್ಗ ತಾಲೂಕಿನವರು ಎಂದು ಗುರುತಿಸಲಾಗಿದೆ. ತಂದೆ-ತಾಯಿ ಇಬ್ಬರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಹಟ್ಟಿ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಸಜ್ಜನ ಹಟ್ಟಿ, ಪಿಎಸ್ಐ ಮುದ್ದುರಂಗಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ರಾಜವಂಶಸ್ಥ ಯದುವೀರ್ ಒಡೆಯರ್ ಹೆಸರಿನಲ್ಲಿ ನಕಲಿ ಟ್ವೀಟ್ ಖಾತೆ!