ರಾಯಚೂರು: ರೈತರಿಗೆ ಪಹಣಿ ಪತ್ರ ಬಹಳ ಮುಖ್ಯವಾಗಿದ್ದು, ಅದರಲ್ಲಿ ಏನಾದರೂ ಲೋಪ ದೋಷಗಳು ಇದ್ದರೆ ಅರ್ಜಿ ಸಲ್ಲಿಸಿದ ಕೂಡಲೇ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಆರ್.ಟಿ.ಸಿ ಮತ್ತು ಪಹಣಿ ತಿದ್ದುಪಡಿ ಪ್ರಕರಣಗಳ ತ್ವರಿತ ವಿಲೇವಾರಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಪಹಣಿ ಅತಿ ಅವಶ್ಯಕವಾಗಿದ್ದು, ಅದರಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಬಾಕಿ ಉಳಿದಿರುವ ಆರ್.ಟಿ.ಸಿ ಮತ್ತು ಪಹಣಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು, ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅಧಿಕಾರಿಗಳ ತಂಡ ರಚನೆ ಮಾಡಿ, ತಂಡಗಳಿಗೆ ಪ್ರತಿ ವಾರದ ಗುರಿ ನಿಗಧಿ ಪಡಿಸಿದ್ದು, ಅದರಂತೆ ಕೆಲಸ ನಿರ್ವಹಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರರು ಡಾ.ಹಂಪಣ್ಣ ಸಜ್ಜನ್, ಸಂಬಂಧಿತ ಎ.ಡಿ.ಎಲ್.ಆರ್ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.