ಲಿಂಗಸುಗೂರು (ರಾಯಚೂರು): ಉನ್ನತ ಮಟ್ಟದ ಸರ್ಕಾರಿ ಹುದ್ದೆಯ ಕನಸು ಕಂಡಿದ್ದ ಕಡುಬಡ ಕುಟುಂಬದ ವ್ಯಕ್ತಿಯೋರ್ವ ಕೋವಿಡ್ಗೆ ಬಲಿಯಾಗಿದ್ದು, ಕುಟುಂಬಕ್ಕೀಗ ದಿಕ್ಕು ತೋಚದಂತಾಗಿದೆ.
ಮೌಲಾಸಾಬ್ ಗೌಳಿ ತಂದೆ ಹುಸೇನ್ಸಾಬ್ ಗೌಳಿ ಪುತ್ರನಿಗೆ ಉನ್ನತ ಶಿಕ್ಷಣ ಕೊಡಿಸಿ ಆತನನ್ನು ಸರ್ಕಾರಿ ಹುದ್ದೆಯಲ್ಲಿ ಕಾಣುವ ಕನಸು ಕಂಡಿದ್ದರು. ಇದಕ್ಕಾಗಿ ಮೌಲಾಸಾಬ್ ಕಷ್ಟಪಟ್ಟು ಬಿ.ಎ, ಬಿಎಡ್. ಡಿಎಡ್ ಪದವಿ ಮಾಡಿದ್ದಲ್ಲದೆ, ಐಎಎಸ್, ಕೆಎಎಸ್ ಉನ್ನತ ಹುದ್ದೆ ಅಲಂಕರಿಸುವ ಮಹದಾಸೆಯೂ ಅವರಿಗಿತ್ತು.
ಇವರು ಏಕಕಾಲಕ್ಕೆ ಎಫ್ಡಿಎ, ಎಸ್ಡಿಎ ಹಾಗೂ ಶಿಕ್ಷಕರ ಹುದ್ದೆಗೆ ಆಯ್ಕೆಯೂ ಆಗಿದ್ದರು. ಆದರೆ ಇವುಗಳಲ್ಲಿ ಎಫ್ಡಿಎ ಆಯ್ದುಕೊಂಡು ಕೋಲಾರದ ಮಾಲೂರು ತಾಲೂಕಿನ ಕಂದಾಯ ಇಲಾಖೆಗೆ 14 ತಿಂಗಳ ಹಿಂದೆ ಹಾಜರಾಗಿದ್ದರು.
ಇಷ್ಟೇ ಅಲ್ಲ, ಒಂದೂವರೆ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಇವರು ಕಾಲಿಟ್ಟಿದ್ದರು. ಆದರೆ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಕುಟುಂಬಸ್ಥರಿಗೆ ಸಿಡಿಲು ಬಡಿದಂತಾಗಿದೆ.
ಕೊರೊನಾದಿಂದ ಮೃತಪಡುವ ಮೊದಲು ಆತ ಕುಟುಂಬಸ್ಥರ ಬಳಿ ತನ್ನ ಕನಸಿನ ಬಗ್ಗೆ ಮಾತನಾಡಿದ್ದಾನೆ. ಮೌಲಾಸಾಬ್ನ ಸಾವು ತೀವ್ರ ನೋವುಂಟು ಮಾಡಿದೆ ಎಂದು ಸ್ಥಳೀಯರು ಹಾಗೂ ಆತನ ಸ್ನೇಹಿತರು ನೋವು ತೋಡಿಕೊಂಡಿದ್ದಾರೆ.