ರಾಯಚೂರು: ಮಸ್ಕಿ ಕ್ಷೇತ್ರದ ವಿಧಾನ ಸಭಾ ಉಪಚುಣಾವಣೆ ಮುಂಬರುವ ದಿನಗಳಲ್ಲಿ ನಡೆಯಲಿದ್ದು, ಕಾಂಗ್ರೆಸ್ - ಬಿಜೆಪಿ ಭಾರಿ ಸಿದ್ದತೆ ನಡೆಸಿಕೊಳ್ಳುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಕ್ಷೇತ್ರದ ವಿವಿಧ ಯೋಜನೆಗಳಿಗಾಗಿ ಕ್ಷೇತ್ರಕ್ಕೆ 110 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶಿಸಿದೆ.
ಹಲವು ವರ್ಷಗಳ ಬೇಡಿಕೆಯಾಗಿದ್ದ ಮಸ್ಕಿ ನಾಲಾ ಆಧುನೀಕರಣ 52.54 ಕೋಟಿ ರೂ., ನೀರಾವರಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳ ಆಧುನೀಕರಣಕ್ಕೆ 11 ಕೋಟಿ ರೂ., ಗ್ರಾಮೀಣಾಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ 110 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವ ಮೂಲಕ ಭರ್ಜರಿ ಉಡುಗೊರೆ ನೀಡಿದೆ. ಇದಕ್ಕೆ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಸೇರ್ಪಡೆಯಾಗಿದ್ದರು. ರಾಜೀನಾಮೆ ಬಳಿಕ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಕಾನೂನಾತ್ಮಕ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆ ದೂರವಾಗಿ ಮುಂಬರುವ ದಿನಗಳಲ್ಲಿ ಬೈ ಎಲೆಕ್ಷನ್ ಎದುರಾಗಲಿದ್ದು, ಉಪಚುನಾವಣೆ ದಿನಾಂಕ ಘೋಷಣೆ ಮುನ್ನವೇ ಎರಡೂ ಪಕ್ಷಗಳು ಕ್ಷೇತ್ರದಲ್ಲಿ ಚುನಾವಣೆ ತಂತ್ರಗಾರಿಕೆಯನ್ನು ರೂಪಿಸುತ್ತಿವೆ.