ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ 15 ವರ್ಷದ ಬಾಲಕಿಯ ಮೇಲೆ ಕಾಮುಕನೋರ್ವ ಅತ್ಯಾಚಾರ ಎಸಗಿದ್ದು, ಇದೀಗ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ತಮ್ಮ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಅದೇ ಗ್ರಾಮದ ಮದುವೆಯಾದ ಕಾಮುಕ ಮಲ್ಲಿಕಾರ್ಜುನ ಮುನಿನಾಯ್ಕ್ ಎಂಬಾತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರದ ಕುರಿತು ಬಾಲಕಿ ಸಹ ತಮ್ಮ ಪೋಷಕರಿಗೆ ವಿಷಯ ತಿಳಿಸಿಲ್ಲ. ನಿನ್ನೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಾಗ, ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಇನ್ನು, ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದರಿಂದ ಜನಿಸಿದ ಮಗುವಿನ ತೂಕ ಕಡಿಮೆಯಾಗಿತ್ತು. ಆದರೆ, ಚಿಕಿತ್ಸೆಯ ಬಳಿಕ ಮಗು ಚೇತರಿಸಿಕೊಂಡಿದ್ದು, ಸದ್ಯಕ್ಕೆ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ವಿಷಯ ತಿಳಿದು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಬಾಲಕಿಗೆ ಸ್ವಾಂತನ ಹೇಳಿ, ಮಗುವಿನ ಆರೈಕೆ ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗೂ ಬಾಲಕಿ ಮಗು ಬೇಡವೆಂದರೆ ಕಲಬುರಗಿ ಅಮ್ಯೂಲ ಶಿಶು ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪಾಲನೆ ಪೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಈ ಘಟನೆ ಕುರಿತಂತೆ ರಾಯಚೂರು ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಲ್ಲಿಕಾರ್ಜುನ ಮುನಿನಾಯ್ಕ್‌ನ ವಶಕ್ಕೆ ಪಡೆದುಕೊಂಡು, ಕಲಂ 376, 420, 323,504,504 ಮತ್ತು ಐಪಿಸಿ 3 &4 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.