ರಾಯಚೂರು: ಲಿಂಗಸಗೂರು ಉಪವಿಭಾಗ ವ್ಯಾಪ್ತಿಯ ದೇವಸ್ಥಾನದ ಬೆಳ್ಳಿ ವಿಗ್ರಹ ಕಳ್ಳತನ, ಮನೆಗಳ್ಳತನ, ಮೋಟರ್ ಸೈಕಲ್, ಕುರಿ ಕಳುವು ಸೇರಿದಂತೆ 21 ಪ್ರಕರಣಗಳಲ್ಲಿ ಭಾಗಿಯಾದ ಒಂಭತ್ತು ಆರೋಪಿಗಳನ್ನು ಬಂಧಿಸಲಾಗಿದೆ.
₹29,28,600 ಮೌಲ್ಯದ ಚಿನ್ನಾಭರಣ, ಒಂದು ಮೋಟಾರ್ ಸೈಕಲ್, ಒಂದು ಕಾರನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದರು. ಪ್ರಭು (32), ಅರ್ಜುನ್, ಹೇಮ (20), ಭಾಷಾ (22), ಮಾನಪ್ಪ(26), ಗೋಕುಲಸಾಬ್ (19), ದಾದಾಪೀರ್ (19) ದಾವಲ್ ಸಾಬ್ (23), ಹುಸೇನ್ ಸಾಬ್(30) ಬಂಧಿತರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗ, ಮಸ್ಕಿ, ಲಿಂಗಸುಗೂರು ಮತ್ತು ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ದಾಖಲಾಗಿವೆ. ಈ ವ್ಯಾಪ್ತಿಯಲ್ಲಿ ದೇವಸ್ಥಾನದ ಬೆಳ್ಳಿ ವಿಗ್ರಹ ದೋಚಿದ್ದು, ಮನೆಗಳ್ಳತನ, ಮೋಟಾರ್ ಸೈಕಲ್, ಕುರಿ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಲು ಎಸ್ಪಿ, ಡಿವೈಎಸ್ಪಿ, ಪಿಎಸ್ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಮಾಹಿತಿ ನೀಡಿದರು.
9 ಪ್ರಕರಣಗಳ ಪೈಕಿ ಮುಂಡರಗಿ ದೇವಸ್ಥಾನದ ಬೆಳ್ಳಿ ವಿಗ್ರಹ ಕಳವು ಪ್ರಕರಣವೂ ಒಂದು. ದೇವದುರ್ಗ ವೃತ್ತದಲ್ಲಿ ಬಂಧಿತರಿಂದ ₹4,93,000 ಮೌಲ್ಯದ 7.100 ಕೆಜಿ ಬೆಳ್ಳಿ, ₹ 1,97,600 ಮೌಲ್ಯದ ಚಿನ್ನಾಭರಣ, ಕುರಿ ಕಳ್ಳತನ ಮಾಡಿ ಮಾರಿದ ಹಣ ₹1,53,000, ಕೃತ್ಯಕ್ಕೆ ಬಳಸಿದ ₹5 ಲಕ್ಷ ಮೌಲ್ಯದ ಕಾರು ಸೇರಿದಂತೆ ಕೃತ್ಯಕ್ಕೆ ಬಳಸಿದ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತು ಮಸ್ಕಿ ವೃತ್ತ ವ್ಯಾಪ್ತಿಯಲ್ಲಿ ₹14,30,000 ಮೌಲ್ಯದ 280 ಗ್ರಾಂ ಚಿನ್ನಾಭರಣ, ಕಳ್ಳತನದ ₹ 1,15,000 ನಗದು, ಒಂದು ಮೋಟರ್ ಸೈಕಲ್ ವಶಕ್ಕೆ ಪಡೆಯಲಾಗಿದೆ.