ರಾಯಚೂರು : 7ನೇ ಆರ್ಥಿಕ ಗಣತಿ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ತರಬೇತಿದಾರರು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ 7 ನೇ ಆರ್ಥಿಕ ಜನಗಣತಿ-2019 ರ ತರಬೇತುದಾರರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲೂ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. 10 ನೇ ತರಗತಿವರೆಗೆ ಶಿಕ್ಷಣ ಪಡೆದವರು ಹಾಗೂ ಆಂಡ್ರಾಯ್ಡ್ ಫೋನ್ ಹೊಂದಿರುವವರು ಈ ಗಣತಿಯಲ್ಲಿ ಪಾಲ್ಗೊಳ್ಳಬಹುದು ಎಂದರು.
ಸಹಾಯಕ ಆಯುಕ್ತರಾದ ಶಿಲ್ಪಾ ಶರ್ಮಾ ಮಾತನಾಡಿ, ದೇಶಾದ್ಯಂತ 7 ನೇ ಆರ್ಥಿಕ ಜನಗಣತಿ ಕಾರ್ಯಾಗಾರ ನಡೆಯುತ್ತಿದೆ. ಇದು ದೇಶದ ಎಲ್ಲಾ ಸಾಮಾನ್ಯ ಜನರಿಂದ ಹಿಡಿದು ವ್ಯವಹಾರ ಮಾಡುವ ಜನರಿಗೆ ಅನ್ವಯಿಸುತ್ತದೆ. ಆದ್ದರಿಂದ ತರಬೇತಿದಾರರು ಮನೆ ಮನೆಗೆ ಭೇಟಿ ನೀಡಿ ಸರಿಯಾದ ಮಾಹಿತಿಯ ದತ್ತಾಂಶವನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ಒಪ್ಪಿಸಬೇಕು ಎಂದು ತರಬೇತುದಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೇಶ್‍ಕುಮಾರ್, ರಾಯಚೂರು ತಾಲೂಕು ತಹಶೀಲ್ದಾರರಾದ ಡಾ.ಹಂಪಣ್ಣ, ಕಾರ್ಮಿಕ ನಿರೀಕ್ಷಕರಾದ ವೆಂಕಟಸ್ವಾಮಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶ್ರೀನಿವಾಸ, ಜಿಲ್ಲಾ ಮಟ್ಟದ ಅಧಿಕಾರಿ ನಾಗರಾಜ ಸೇರಿದಂತೆ ತರಬೇತಿಗೆ ಆಗಮಿಸಿದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸದಸ್ಯರು ಉಪಸ್ಥಿತರಿದ್ದರು.