ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ನಾಲೆಯ 20ನೇ ಕಿಲೋ ಮೀಟರ್ ದೂರದಲ್ಲಿ ಬಾಲಕನೊಬ್ಬ ಕಾಲು ಜಾರಿ ಬಿದ್ದಿದ್ದು, ಬಾಲಕನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ಬುಧವಾರ ಲಿಂಗಸುಗೂರು ತಾಲೂಕು ಕಾಳಾಪುರ ಬಳಿ ತಾಯಿ ಚಂದ್ರಮ್ಮಳೊಂದಿಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಮಗ ಬಸವರಾಜ (6) ಕಾಲು ಜಾರಿ ಬಿದ್ದಿದ್ದು, ತಡವಾಗಿ ಗುರುವಾರ ಬೆಳಕಿಗೆ ಬಂದಿದೆ.
ಬೆಳಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ, ಅಗ್ನಿಶಾಮಕ ದಳ ಠಾಣಾಧಿಕಾರಿ ಹೊನ್ನಪ್ಪ ಸಿಬ್ಬಂದಿ ಸಮೇತ ಸ್ಥಳಕ್ಕೆ ಭೇಟಿ ನೀಡಿದ್ದು, ಅಂದಾಜು 20 ಕಿಲೋಮೀಟರ್ನಷ್ಟು ದೂರ ಹುಡುಕಾಟ ನಡೆಸಿದ್ದಾರೆ. ಸದ್ಯ ಬಾಲಕ ಪತ್ತೆಯಾಗಿಲ್ಲ ಎಂದು ಮೂಲಗಳು ದೃಢಪಡಿಸಿವೆ.