ರಾಯಚೂರು : ಜಿಲ್ಲೆಯಲ್ಲಿ ಇಂದು 45 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 763ಕ್ಕೆ ತಲುಪಿದೆ. ಇಂದು ಬಂದ ವರದಿಯಲ್ಲಿ ರಾಯಚೂರು ನಗರದಲ್ಲಿ 36 ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಉಂಟು ಮಾಡಿದೆ.
ಸೋಂಕಿತರಲ್ಲಿ ರಾಯಚೂರು ನಗರದಲ್ಲಿ 36, ತಾಲೂಕಿನ ಪಂಚಮುಖಿ ಗಾಣಧಾಳದಲ್ಲಿ 5, ಶಕ್ತಿನಗರ ಮತ್ತು ಯರಗೇರಾದಲ್ಲಿ ತಲಾ ಒಂದು ಪ್ರಕರಣ, ಲಿಂಗಸುಗೂರು ತಾಲೂಕಿನ ಪೂಲಭಾವಿ ಹಾಗೂ ಸಿರವಾರದಲ್ಲಿ ತಲಾ ಒಂದು ಪ್ರಕರಣಗಳು ಕಂಡುಬಂದಿವೆ.
ನಗರದ ರಿಮ್ಸ್ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗೆ, ಖಾಸಗಿ ಆಸ್ಪತ್ರೆಯಲ್ಲಿ ಒಂದು ಹಾಗೂ ಕಾರಾಗೃಹದ ವಸತಿಗೃಹದಲ್ಲಿನ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆಸ್ಪತ್ರೆ ಸಿಬ್ಬಂದಿ ಮತ್ತು ಕಾರಾಗೃಹ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಇದಲ್ಲದೆ, ಪ್ರಯೋಗಾಲಯದಿಂದ 3,004 ಜನರ ವರದಿ ಬರುವುದು ಬಾಕಿಯಿದೆ. ಜಿಲ್ಲೆಯಲ್ಲಿ 279 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ 170 ಜನರಿಗೆ ಹಾಗೂ ಕ್ವಾರಂಟೈನ್ ಕೇರ್ನಲ್ಲಿ 109 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.