ರಾಯಚೂರು : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹೊಲಕ್ಕೆ ನುಗ್ಗಿರುವ ಘಟನೆ ಜಿಲ್ಲೆಯ ಮಾನವಿ ಪಟ್ಟಣ ಹೊರವಲಯದ ಸಿಂಧನೂರು ರಸ್ತೆಯ ನಂದಿಹಾಳ ಗ್ರಾಮದಲ್ಲಿ ಇಂದು ನಡೆದಿದೆ. ಅಪಘಾತದಲ್ಲಿ ಸುಮಾರು 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಕುರುಬರಹಳ್ಳಿಯ ಚಾಲಕರ ಸಂಘದವರು ಖಾಸಗಿ ಬಸ್‌ನಲ್ಲಿ ಆಗಮಿಸಿದ್ದರು. ಇಂದು ಗುರುರಾಯರ ದರ್ಶನ ಪಡೆದು ಬೆಂಗಳೂರಿಗೆ ಮರಳುತ್ತಿದ್ದರು. ನಂದಿಹಾಳ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಎದುರಿಗೆ ಬರುತ್ತಿದ್ದಾಗ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಜಮೀನಿಗೆ ನುಗ್ಗಿದೆ. ಇದರಿಂದಾಗಿ ಬಸ್ನಲ್ಲಿದ್ದ 25ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನಿಗೆ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಪಿಐ ವೀರಭದ್ರಯ್ಯ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಉಳ್ಳಾಲ ಬಸ್ ಅಪಘಾತ: ಚಾಲಕ- ಮಹಿಳೆ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು
ವಿಜಯಪುರದಲ್ಲಿ ಸರಣಿ ಅಪಘಾತ : ರಾಜ್ಯ ಸಾರಿಗೆ ಬಸ್, ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಐವರು ಗಂಭೀರ ಗಾಯಗೊಂಡಿದ್ದ ಘಟನೆ ವಿಜಯಪುರ ತಾಲೂಕಿನ ಹಡಗಲಿ-ಕಗ್ಗೋಡ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ನಡೆದಿತ್ತು. ಅಪಘಾತದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಜಾಲವಾದಿ ಗ್ರಾಮದ ಬಾಬುಸಾಹೇಬ ಮಕಾನದಾರ (50) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.
ಅಥಣಿಯಿಂದ ಗಾಣಗಾಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಕಲಬುರಗಿಯಿಂದ ವಿಜಯಪುರ ಕಡೆಗೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿತ್ತು. ಇದೇ ವೇಳೆ ಬಸ್ನ ಹಿಂದೆ ಬರುತ್ತಿದ್ದ ಆಟೋಗೂ ಲಾರಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಆಟೋ ರಸ್ತೆ ಬದಿಯ ಹೊಲಕ್ಕೆ ನುಗ್ಗಿತ್ತು. ಮೃತ ಬಾಬುಸಾಹೇಬ ಮಕಾನದಾರ ಎಂಬವರು ತಮ್ಮ ತಾಯಿಗೆ ಬಿಪಿ ಔಷಧಿ ತರಲು ವಿಜಯಪುರಕ್ಕೆ ಬಂದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ : ಉಳ್ಳಾಲ ಬಸ್ ಅಪಘಾತ: ಚಾಲಕ- ಮಹಿಳೆ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು