ರಾಯಚೂರು: ಜಿಲ್ಲೆಯಲ್ಲಿ ಇಂದು ಹೊಸದಾಗಿ 14 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾಲ್ವರು ಮಹಾರಾಷ್ಟ್ರದಿಂದ ವಾಪಸಾದವರು, ರಿಮ್ಸ್ ಆಸ್ಪತ್ರೆಯಲ್ಲಿ ನಾಲ್ವರು ನರ್ಸ್, ಇಬ್ಬರು ಅಟೆಂಡರ್, ಮಸ್ಕಿಯಲ್ಲಿನ ಸೋಂಕಿತ ಪ್ರಾಥಮಿಕ ಸಂಪರ್ಕದಲ್ಲಿದ ಓರ್ವ ಮಹಿಳೆ ಸೇರಿದಂತೆ ಒಟ್ಟು 14 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ ಎಂದರು.
ಇನ್ನು ಜೂ.9 ರಂದು ಸಂಜೆ ಮಾನ್ವಿ ತಾಲೂಕಿನ ಹರವಿ ಗ್ರಾಮದ 60 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಅವರ ಗಂಟಲಿನ ದ್ರವದ ಮಾದರಿ ಲ್ಯಾಬ್‌ಗೆ ಕಳುಹಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ, ಆ ವ್ಯಕ್ತಿಗೆ ಹೃದಯದ ಸಂಬಂಧಿ ಕಾಯಿಲೆ ಹಾಗೂ ಕಿಡ್ನಿ ತೊಂದರೆಯಿತ್ತು. ಹೀಗಾಗಿ ಇವರ ಸಾವನ್ನು ಕೊರೊನಾದಿಂದಲೇ ಆಗಿದೆ ಎಂದು ಹೇಳಲಾಗದು.
ಕೋವಿಡ್ ಪ್ರೋಟೋಕಾಲ್ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ. ಮೃತ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯಿಲ್ಲ. ನರ್ಸಗಳು ಮತ್ತು ಕೋವಿಡ್ ಆಸ್ಪತ್ರೆಯ ಸೋಂಕಿತರ ಸಿಬ್ಬಂದಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಮಾಡಲಾಗುತ್ತಿದ್ದು ಅವರನ್ನು ಐಸೋಲೇಷನ್ ಮಾಡಲಾಗುವುದು ಎಂದು ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ತಿಳಿಸಿದರು.