ರಾಯಚೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಅವರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣವನ್ನು ಕುಟುಂಬಸ್ಥರಿಗೆ ವಾಪಸ್ ನೀಡುವ ಮೂಲಕ 108 ಆರೋಗ್ಯ ಕವಚ ಸಿಬ್ಬಂದಿಗಳು ಕರ್ತವ್ಯನಿಷ್ಠೆ ತೋರಿದ್ದಾರೆ.
2,66,350 ರೂಪಾಯಿ ನಗದು, 3 ಬಂಗಾರದ ಸರ, 3 ಬಂಗಾರದ ಉಂಗುರ, ಮೊಬೈಲ್ ಫೋನ್, ವಾಚ್, ದಾಖಲೆಗಳನ್ನ ಕುಟುಂಬಸ್ಥರಿಗೆ ಮರಳಿ ನೀಡುವ ಮೂಲಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ನಿನ್ನೆ ಮಾನವಿ ತಾಲೂಕಿನ ಬೋಮ್ಮನಾಳ ಕ್ರಾಸ್ ಬಳಿ ಕಾರ್ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕಂಪ್ಲಿ ಮೂಲದ ಪತಿ ಪಂಚಯ್ಯ ಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತ್ನಿ ಶಾಂತಮ್ಮ ಗಾಯಗೊಂಡಿದ್ದರು. ಗಾಯಗೊಂಡ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಘಟನೆ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.