ರಾಯಚೂರು: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದಂದು ನಿಷೇಧದ ನಡುವೆ ಮಾರಾಟವಾಗುತ್ತಿದ್ದ ₹1.80 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊರೊನಾ ಹರಡುವಿಕೆ ನಿಯಂತ್ರಿಸುವ ಸಲುವಾಗಿ ದೀಪಾವಳಿ ಹಬ್ಬದಂದು ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧಿಸಲಾಗಿತ್ತು. ಆದರೆ ಜಿಲ್ಲೆಯ ಸಿಂಧನೂರು, ಲಿಂಗಸಗೂರು, ರಾಯಚೂರಿನಲ್ಲಿ ಮಾರಾಟಕ್ಕೆ ತಂದಿದ್ದ ₹ 1.80 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ ಪಡೆದು, 15 ಜನರನ್ನು ಬಂಧಿಸಿ, 14 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು.
ಅಲ್ಲದೆ ಕೊರೊನಾ ನಿಯಮ ಪಾಲನೆ ಮಾಡದ ವಾಹನ ಸವಾರರ ವಿರುದ್ಧ ಪ್ರತಿನಿತ್ಯ 150ರಿಂದ 200 ಪ್ರಕರಣಗಳನ್ನು ದಾಖಲಿಸಲಾಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು ₹25 ಲಕ್ಷ ರೂ. ದಂಡ ಹಾಕಲಾಗಿದೆ. ಕೆಲ ದಿನಗಳ ಹಿಂದೆ ನಗರದಲ್ಲಿ ನಡೆದ ಮಹಿಳೆಯ ಹಣದ ಬ್ಯಾಗ್ ಕಳ್ಳತನ ಪ್ರಕರಣ ತನಿಖೆಯಲ್ಲಿದೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯ ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.