ರಾಯಚೂರು: ನಾರಾಯಣಪುರ ಅಣೆಕಟ್ಟೆಯಿಂದ 1.16ಲಕ್ಷ ಕ್ಯೂಸೆಕ್ ನೀರನ್ನ ಕೃಷ್ಣಾ ನದಿಗೆ ಹರಿಬಿಡಲಾಗಿದೆ ಎಂದು ಅಣೆಕಟ್ಟೆ ಸಹಾಯಕ ಎಂಜಿನಿಯರ್ ವಿಜಯಕುಮಾರ ಅರಳಿ ತಿಳಿಸಿದ್ದಾರೆ..
ಕೃಷ್ಣಾ, ಮಲಪ್ರಭಾ, ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಆಲಮಟ್ಟಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ನಾರಾಯಣಪುರ ಅಣೆಕಟ್ಟೆಗೆ ಹರಿಬಿಡಲಾಗಿದೆ.
ಆಲಮಟ್ಟಿ, ಮಲಪ್ರಭಾ ಜಲಾನಯ ಪ್ರದೇಶದಿಂದ ಹೆಚ್ಚಿನ ಒಳಹರಿವು ಇರುವುದರಿಂದ ಬೆಳಗಿನ ಜಾವ ಅಣೆಕಟ್ಟೆ ಸಾಮರ್ಥ್ಯ 492.252 ಪೈಕಿ 492.130 ಮೀಟರ್ ಮಟ್ಟ ಕಾಯ್ದುಕೊಂಡು 19 ಕ್ರಸ್ಟ್ ಗೇಟ್ಗಳ ಮೂಲಕ 1,16,200 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡಲಾಗಿದೆ. ಕೃಷ್ಣಾ ನದಿ ಪ್ರವಾಹದಲ್ಲಿ ಹೆಚ್ಚು ಕಡಿಮೆ ಆಗುತ್ತಿದ್ದು, ಲಿಂಗಸುಗೂರು, ದೇವದುರ್ಗ, ರಾಯಚೂರು, ಸುರಪುರ, ಯಾದಗಿರಿ ನದಿ ಪಾತ್ರ ಹಾಗೂ ನಡುಗಡ್ಡೆ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ.