ಮೈಸೂರು: ಟಿ.ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಟಿ.ನರಸೀಪುರ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಟಿ.ನರಸೀಪುರ ಹೊರವಲಯದಲ್ಲಿ ಯುವ ಬ್ರಿಗೇಡ್ನ ಸಕ್ರಿಯ ಸದಸ್ಯ ವೇಣುಗೋಪಾಲ್ ನಾಯಕ್ ಎಂಬುವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಈ ತಂಡ ಸೋಮವಾರ ಬೆಳಗ್ಗೆ ಪ್ರಮುಖ ಆರೋಪಿಗಳಾದ ಮಣಿಕಂಠ ಹಾಗೂ ಸಂದೇಶ್ ಎಂಬುವರನ್ನು ಬಂಧಿಸಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳಾದ ಹ್ಯಾರಿಸ್, ಶಂಕರೇಗೌಡ, ಅನಿಲ್ ನಾಯಕ್ ಹಾಗೂ ಮಂಜು ಎಂಬುವರು ತಲೆಮರೆಸಿಕೊಂಡಿದ್ದರು. ಸದ್ಯ ಅವರನ್ನೂ ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿವೈಎಸ್ಪಿ ಗೋವಿಂದರಾಜು ಈಟಿವಿ ಭಾರತಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ: ಟಿ.ನರಸೀಪುರ ತಾಲೂಕಿನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಶ್ರೀರಾಂಪುರ ಕಾಲೋನಿಯ ಯುವ ಬ್ರಿಗೇಡ್ನ ಕಾರ್ಯಕರ್ತ ವೇಣುಗೋಪಾಲ್ (32) ಅವರನ್ನು ಭಾನುವಾರ ಹತ್ಯೆ ಮಾಡಲಾಗಿದೆ. ನಟ ಪುನೀತ್ ರಾಜ್ಕುಮಾರ್ ಭಾವಚಿತ್ರ ಅಳವಡಿಕೆ ವಿಚಾರ ಮತ್ತು ಬೈಕ್ ನಿಲ್ಲಿಸುವ ಕುರಿತು ಜಗಳ ನಡೆದಿದ್ದು, ಈ ಗಲಾಟೆಯಲ್ಲಿ ಯುವಕ ವೇಣುಗೋಪಾಲ್ (32) ಕೊಲೆ ಮಾಡಲಾಗಿದೆ. ಪರಿಚಯಸ್ಥರ ನಡುವೆಯೇ ಈ ಘಟನೆ ಆಗಿದೆ. ಈ ಪ್ರಕರಣಕ್ಕೆ ಯಾವುದೇ ಕೋಮು ಸಂಬಂಧ ಇಲ್ಲ. ಪ್ರಕರಣದ ಕುರಿತು ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?: ಭಾನುವಾರ ಹನುಮ ಜಯಂತಿ ಆಚರಣೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಜರುಗಿತ್ತು. ಈ ವೇಳೆ ಕೆಲವರು ಉಭಯ ಬಣಗಳನ್ನೂ ಸಮಾಧಾನಪಡಿಸಿದ್ದರು. ಇದಾದ ಬಳಿಕ ಮತ್ತೆ ಜಗಳ ನಡೆದು ಯುವಕನ ಹತ್ಯೆ ನಡೆದಿತ್ತು. ಕೊಲೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಪಿ.ಗೋವಿಂದರಾಜು, ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯುವಕನ ಮೃತದೇಹವನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ: Vijayapur crime: ಭೀಮಾತೀರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ.. ಹಳೇ ದ್ವೇಷಕ್ಕೆ ಕೊಲೆ ಶಂಕೆ
ಮಂಗಳವಾರ ನಡೆದ ವಿಧಾನಸಭೆ ಅಧಿವೇಶನದ ಶೂನ್ಯ ವೇಳೆ ಈ ಕೊಲೆ ಪ್ರಕರಣ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತಾಪ ಮಾಡಿ ''ಟಿ ನರಸೀಪುರ ಹನುಮ ಜಯಂತಿ ವೇಳೆ ನಡೆದ ಗಲಾಟೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯಾಗಿದೆ. ಮಣಿಕಂಠ ಮತ್ತು ಸ್ನೇಹಿತರು ವೇಣುಗೋಲ್ ಜೊತೆ ಗಲಾಟೆ ಆಯಿತು. ಬಳಿಕ ಸಂಧಾನ ಮಾಡಬೇಕು ಅಂತ ಅವರನ್ನು ಕರೆಯಿಸಿ ಕೊಲೆ ಮಾಡಲಾಗಿದೆ. ಯಾರೇ ಕೊಲೆ ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಅದರ ಹಿಂದೆ ಪಿತೂರಿ ಹಾಗೂ ಯಾವುದಾದರೂ ಶಕ್ತಿಗಳು ಇರಬಹುದು. ಸಣ್ಣ ವಿಚಾರಕ್ಕೆ ಕೊಲೆ ನಡೆದರೆ ಹೇಗೆ? ಗಲಾಟೆ ಆದಾಗಲೇ ಅವರಿಗೆ ವಾರ್ನಿಂಗ್ ಕೊಟ್ಟು ಶಾಂತಿ ಕಾಪಾಡಲು ಯತ್ನ ಮಾಡಿಲ್ಲ. ಪೊಲೀಸರು ಎಫ್ಐಆರ್ ದಾಖಲಿಸಿಯೇ ಇಲ್ಲ, ಆಗಲೇ ಹೇಳಿಕೆ ಕೊಡಲು ಆರಂಭಿಸಿದ್ದಾರೆ. ಇಂತಹ ವಿಚಾರಕ್ಕಾಗಿ ಹಲವಾರು ಪ್ರಕರಣಗಳು ನಡೆದಿದ್ದು, ಅವರಿಗೆ ಭಯ ಇಲ್ಲ. ಅವರಿಗೆ ಕುಮ್ಮಕ್ಕು ಸಿಗುತ್ತಿದೆ. ಸಣ್ಣ ಸಣ್ಣ ವಿಚಾರ ಕೊಲೆಯಲ್ಲಿ ಅಂತ್ಯವಾಗುತ್ತಿದೆ. ಇಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು'' ಎಂದು ಆಗ್ರಹಿಸಿದರು.