ಮೈಸೂರು: ಸಂಪುಟ ವಿಸ್ತರಣೆ ಬಳಿಕ ಯಾರಿಗಾದ್ರು ಅಸಮಾಧಾನ ಇದ್ರೆ ಅದನ್ನ ಹೈಕಮಾಂಡ್ ಸರಿಪಡಿಸುತ್ತೆ. ಯಡಿಯೂರಪ್ಪ ಸ್ಟ್ರಾಂಗ್ ಇದ್ದಾರೆ. ಕೇಂದ್ರದಲ್ಲೂ ನಮ್ಮ ಸರ್ಕಾರ ಇದೆ ಎಂದು ನೂತನ ಸಚಿವ ಎಸ್.ಟಿ.ಸೋಮಶೇಖರ್ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಮಠದ ಪೀಠಾಧಿಪತಿ ಡಾ.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲು ಅಸಮಾಧಾನ ಇತ್ತು. ಕುಮಾರಸ್ವಾಮಿ ಸಿಎಂ ಆಗಿದ್ದಾಗಲು ಅಸಮಾಧಾನ ಇತ್ತು. ಅಸಮಾಧಾನ ಎಲ್ಲರಲ್ಲೂ ಇರುತ್ತೆ. ನಂತರ ಸರಿಯಾಗಲಿದೆ ಎಂದರು.
ನೂತನ ಸಚಿವರು ಈಗಲೂ ಅನರ್ಹರು ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಉತ್ತರಿಸಿದ ಅವರು, ಸುಪ್ರೀಂಕೋರ್ಟ್ ಹೇಳಿದ ಮೇಲೆ ಸಿದ್ದರಾಮಯ್ಯ ಅವರದ್ದು ಏನು?. ನಾನು ಬಿಡಿಎ ಚೇರ್ಮನ್ ಆಗಿದ್ದೆ. ರಾಜೀನಾಮೆ ನೀಡಿದ ಮೇಲೆ ನಮ್ಮನ್ನು ಅನರ್ಹರು ಅಂತ ಸ್ಪೀಕರ್ ಹೇಳಿದ್ದರು. ಸುಪ್ರೀಂಕೋರ್ಟ್ ಕೂಡ ಅನರ್ಹತೆ ತೀರ್ಪು ಎತ್ತಿ ಹಿಡಿದಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು ಬನ್ನಿ ಅಂತ ಹೇಳಿತ್ತು. ಚುನಾವಣೆಯಲ್ಲಿ ನಿಂತೂ ಆಗಿದೆ, ಗೆದ್ದೂ ಆಗಿದೆ. ಈಗ ನಾವು ಅನರ್ಹರು ಅಂತ ಹೇಳಲು ಸಿದ್ದರಾಮಯ್ಯ ಯಾರು ಎಂದು ಪ್ರಶ್ನಿಸಿದರು.
ನಾವು ಬಿಜೆಪಿ ಶಾಸಕರು, ಸಚಿವರಾಗಿರುವುದು ಅವರಿಗೆ ಯಾಕೆ ಖುಷಿ ಆಗಬೇಕು?. ಅವರಿಂದ ನಾವೇನೂ ಸಚಿವರಾಗಿಲ್ಲವಲ್ಲ? ಎಂದು ತಿರುಗೇಟು ನೀಡಿದರು.