ಮೈಸೂರು: ಸಂಕಷ್ಟದ ಸಮಯದಲ್ಲಿ ನಾಡಿನ ಜನತೆಗೆ ಆರೋಗ್ಯ, ಸಮೃದ್ಧಿ ಉಂಟಾಗಲಿ ಎಲ್ಲಾ ಸಂಕಷ್ಟಗಳು ದೂರ ಮಾಡಲಿ ಎಂದು ಚಾಮುಂಡೇಶ್ವರಿಗೆ ಪ್ರಾರ್ಥನೆ ಮಾಡಿದ್ದೇವೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಪ್ರತಿಕ್ರಿಯಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ಚಾಮುಂಡೇಶ್ವರಿ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ್, ಸರಳ ದಸರಾದಲ್ಲಿ ಎಲ್ಲಾ ವಿಧಿವಿಧಾನಗಳು ಬಹಳ ಸರಳವಾಗಿ ಆಚರಿಸಿದ್ದೇವೆ. ಈ ರಥೋತ್ಸವವೂ ಕೂಡ ಸರಳವಾಗಿ ನಡೆದಿದೆ. ಎಲ್ಲಾ ವಿಧಿವಿಧಾನಗಳನ್ನು ನಾವು ಅನುಸರಿಸಿ ಇಂದು ಚಾಮುಂಡಿ ಬೆಟ್ಟದಲ್ಲಿ ದೊಡ್ಡ ರಥಕ್ಕೆ ಬದಲಾಗಿ ಚಿಕ್ಕ ರಥದಲ್ಲಿ ರಥೋತ್ಸವ ಆಚರಿಸಿದ್ದೇವೆ.
ಎಲ್ಲಾ ಕಡೆಯೂ ಸರಳವಾಗಿ ಆಗಬೇಕಿರುವ ಈ ಕಾಲಕ್ಕೆ ಸರಳ ರಥೋತ್ಸವವೂ ಕೂಡ ಸೂಕ್ತವಾದದ್ದು, ಸಾಂಕ್ರಾಮಿಕ ಪರಿಸ್ಥಿತಿಗೆ ಏನು ಮಾಡಬೇಕು ಅದನ್ನು ಈ ನವರಾತ್ರಿಯ ರಥೋತ್ಸವದಲ್ಲಿ ಪೂರ್ಣಗೊಳಿಸಿದ್ದೇವೆ. ನಮ್ಮ ನಾಡಿನ ಸಮೃದ್ಧಿ, ಆರೋಗ್ಯ ಹಾಗೂ ಈ ವರ್ಷದ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ನಾಡಿನ ಎಲ್ಲಾ ಜನತೆಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.