ಮೈಸೂರು: ಮೈಸೂರಿನ ಯದು ವಂಶಸ್ಥರು ಅರಮನೆಯಲ್ಲಿ ಶರನ್ನವರಾತ್ರಿ ವೇಳೆ ನಡೆಸಿಕೊಂಡು ಬಂದಿರುವ ಧಾರ್ಮಿಕ ಕಾರ್ಯಗಳು ಇಂದು ಸಹಾ ಅದೇ ರೀತಿ ಮುಂದುವರೆದುಕೊಂಡು ಬಂದಿವೆ. ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 8ನೇ ಬಾರಿ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಧಾರ್ಮಿಕ ಕಾರ್ಯಗಳು ಆರಂಭ: 10 ದಿನಗಳ ಕಾಲ ನಡೆಯಲಿರುವ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಗಳು ನಾಳೆ ಅಂದರೆ ಸೆ.26 ರಂದು ಬೆಳಗಿನಿಂದಲೇ ಆರಂಭವಾಗಲಿವೆ. ನಾಳೆ ಮುಂಜಾನೆ ಶರನ್ನವರಾತ್ರಿ ಮೊದಲ ದಿನವಾಗಿದ್ದು, ಹೋಮ ಹವನಗಳು ನಡೆಯಲಿವೆ. ಮುಂಜಾನೆ 5.10 ರಿಂದ 5.30 ವರೆಗೆ ದರ್ಬಾರ್ ಹಾಲ್ನಲ್ಲಿ ಸೆ.20 ರಂದು ಜೋಡಣೆಯಾದ ರತ್ನಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುವುದು. ಆಗ ಆಸನ ಸಿಂಹಾಸನವಾಗಲಿದೆ.
![Worship to the jeweled throne monday](https://etvbharatimages.akamaized.net/etvbharat/prod-images/kn-mys-04-25-09-2022-mysorepalaceprogramnews-7208092_25092022135838_2509f_1664094518_1059.jpg)
ಸೋಮವಾರ ಸಿಂಹಾರೋಹಣ: ನಾಳೆ ಬೆಳಗ್ಗೆ 8.05 ರಿಂದ 8.55 ರ ವರೆಗಿನ ಶುಭ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚಾಮುಂಡಿ ತೊಟ್ಟಿಯಲ್ಲಿ ಕಂಕಣ ಧಾರಣೆ ಮಾಡಲಾಗುವುದು. ಬಳಿಕ ಚಾಮುಂಡಿ ತೊಟ್ಟಿಯಿಂದ ವಾಣಿವಿಲಾಸ ದೇವರ ಮನೆಗೆ ಕಂಕಣವನ್ನು ತಂದು ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುವುದು. ಅಂದು ಬೆಳಗ್ಗೆ 9.30 ರಿಂದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಸವಾರಿ ತೊಟ್ಟಿಗೆ ಆಗಮಿಸಲಿದೆ. 9.50 ರಿಂದ 10.35 ಒಳಗೆ ಕಳಸ ಪೂಜೆ ಹಾಗೂ ಸಿಂಹಾರೋಹಣ ನೆರವೇರಲಿದೆ.
33 ದೇವಾಲಯಗಳ ಪ್ರಸಾದ ಸೇವನೆ: ಬಳಿಕ ಯದುವೀರ್ ಖಾಸಗಿ ದರ್ಬಾರ್ ನಡೆಸಲಿದ್ದು, ಖಾಸಗಿ ದರ್ಬಾರ್ ಮುಗಿದ ನಂತರ 33 ದೇವಾಲಯ ಅಂದರೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ, ಅರಮನೆ ಆವರಣದಲ್ಲಿರುವ ತ್ರಿನೇಶ್ವತ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯ, ಗಣೇಶ ಹಾಗೂ ಕೃಷ್ಣ ದೇವಾಲಯಗಳು ಸೇರಿದಂತೆ 33 ದೇವಾಲಯಗಳಿಂದ ತಂದ ಪ್ರಸಾದವನ್ನು ಸೇವಿಸಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ನ ಮೊದಲ ದಿನದ ಶರನ್ನವರಾತ್ರಿ ಪೂಜೆಯನ್ನು ಸಂಪನ್ನಗೊಳಿಸುತ್ತಾರೆ.
ಇದನ್ನೂ ಓದಿ: ನಾಳೆ ರಾಷ್ಟ್ರಪತಿ ಮುರ್ಮು ಅವರಿಂದ ನಾಡಹಬ್ಬ ದಸರಾ ಉದ್ಘಾಟನೆ: ವೈವಿಧ್ಯಮಯ ಕಾರ್ಯಕ್ರಮಗಳ ವಿವರ
ನಂತರ ಅರಮನೆ ವಾದ್ಯದಿಂದ ಕಾಯೋಶ್ರೀ ಗೌರಿ ಗೀತೆಯನ್ನು ಅರಮನೆಯ ಬ್ಯಾಂಡ್ ವಾದ್ಯ ತಂಡ ನುಡಿಸುತ್ತಾರೆ. ಈ ಮೂಲಕ ಮೊದಲ ದಿನದ ಪೂಜಾ ಕಾರ್ಯಗಳು ಕೊನೆಗೊಳ್ಳುತ್ತವೆ. ಈ ಹಿನ್ನೆಲೆ ಅರಮನೆಯ ಪ್ರವೇಶಕ್ಕೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 1.30 ವರೆಗೆ ಪ್ರವೇಶವನ್ನು ನಿಷೇಧ ಮಾಡಲಾಗಿದೆ.
ಆಯುಧ ಪೂಜೆ: ಅಕ್ಟೋಬರ್ 04 ರಂದು ಬೆಳಗ್ಗೆ ಅರಮನೆಯಲ್ಲಿ ಆಯುಧ ಪೂಜೆ, ಧಾರ್ಮಿಕ ಕಾರ್ಯಗಳು ನಡೆಯಲಿವೆ. ಅಂದು ರತ್ನಖಚಿತ ಖಡ್ಗ ಸೇರಿದಂತೆ ಹಿಂದಿನ ರಾಜರು ಬಳಸುತ್ತಿದ್ದ ಆಯುಧಗಳಿಗೆ ಪೂಜೆ ಹಾಗೂ ಪಟ್ಟದ ಕುದುರೆ, ಹಸು, ಆನೆ ಸೇರಿದಂತೆ ರಾಜರು ಬಳಸುವ ಐಷಾರಾಮಿ ಕಾರುಗಳಿಗೂ ಆಯುಧ ಪೂಜೆಯನ್ನು ನೆರವೇರಿಸಲಾಗುವುದು.
ಅಕ್ಟೋಬರ್ 05 ರಂದು ವಿಜಯದಶಮಿ: ಅಕ್ಟೋಬರ್ 05 ರಂದು ವಿಜಯದಶಮಿ ದಿನ ಬೆಳಗ್ಗೆ ಆನೆಬಾಗಿಲಿನಲ್ಲಿ ವಜ್ರಮುಷ್ಠಿ ಕಾಳಗ ನಡೆಸಲಾಗುವುದು. ನಂತರ ರಾಜರ ಪಟ್ಟದ ಹಸು, ಕುದುರೆ, ಆನೆಗಳ ಮೂಲಕ ಮಹಾರಾಜರು ಬೆಳ್ಳಿ ಪಲ್ಲಕ್ಕಿಯಲ್ಲಿ ವಿಜಯದ ಯಾತ್ರೆ ಹೊರಟು ಭುವನೇಶ್ವರಿ ದೇವಾಲಯದ ಬಳಿಯಿರುವ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ ವಿಜಯಯಾತ್ರೆ ನಡೆಸುತ್ತಾರೆ. ಕಂಕಣವನ್ನು ವಿಸರ್ಜನೆ ಮಾಡಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಂಬೂಸವಾರಿಯ ಪುಷ್ಪಾರ್ಚನೆಯಲ್ಲಿ ಭಾಗವಹಿಸುತ್ತಾರೆ.