ಮೈಸೂರು: ಜಿಲ್ಲೆಯ ವಿದ್ಯಾರಣ್ಯಪುರಂನ ವೀರಶೈವ ರುದ್ರ ಭೂಮಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿರುವ ವೃದ್ಧೆಯೊಬ್ಬರು ಕಳೆದ 17 ವರ್ಷಗಳಿಂದ ಶವಗಳಿಗೆ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಇವರ ಸೇವೆ ಕಂಡು ಅನೇಕ ಸಂಘ-ಸಂಸ್ಥೆಗಳು ಇವರಿಗೆ ಸನ್ಮಾನ ಮಾಡಿದ್ದಾರೆ.
ನೀಲಮ್ಮ ಅವರು ಹೆಚ್.ಡಿ.ಕೋಟೆಯಿಂದ ಮದುವೆಯಾಗಿ ಬಂದಾಗಿನಿಂದ ಸ್ಮಶಾನದಲ್ಲೇ ವಾಸವಾಗಿದ್ದಾರೆ. ಇವರ ಗಂಡ ಶವಗಳಿಗೆ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿದ್ದರು. 2005ರಲ್ಲಿ ಹೃದಯಾಘಾತದಿಂದ ತೀರಿಕೊಂಡರು. ಇದಾದ ನಂತರ ನೀಲಮ್ಮ ಅವರಿಗೆ ಮುಂದೆ ಏನು ಮಾಡುವುದು? ಎನ್ನುವುದು ತಿಳಿಯದೆ ತಾವೇ ಗುಂಡಿ ತೆಗೆಯಲು ಪ್ರಾರಂಭಿಸಿದರು.
ಹೊರಗಡೆ ಎಲ್ಲಿಯೂ ಹೋಗದೆ ಸ್ಮಶಾನದ ಕಾಂಪೌಂಡ್ ಒಳಗೆ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸವನ್ನು ಕಂಡು ಯಾರೂ ಏನೂ ಹೇಳಲಿಲ್ಲ. ಹಾಗಾಗಿ, ಇವರು ಕಳೆದ 17 ವರ್ಷಗಳಿಂದ ಸ್ಮಶಾಣದಲ್ಲೇ ವಾಸವಾಗಿದ್ದುಕೊಂಡು ಶವಗಳಿಗೆ ಗುಂಡಿ ತೆಗೆಯುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ಗುಂಡಿ ತೆಗೆಯಲು ಶುರು ಮಾಡಿದಾಗ ಒಂದು ಗುಂಡಿಗೆ 200 ರೂಪಾಯಿ ನೀಡುತ್ತಿದ್ದರು. ಈಗ 1000 ರೂಪಾಯಿ ನೀಡುತ್ತಿದ್ದಾರಂತೆ.
ಒಂದು ಗುಂಡಿಯನ್ನು ತೆಗೆಯಲು ಇವರಿಗೆ 3 ರಿಂದ 3:30 ಗಂಟೆ ಬೇಕಾಗುತ್ತದೆ. ವಯಸ್ಸಾಗಿರುವುದರಿಂದ ಕೆಲವೊಮ್ಮೆ ಇವರ ಮಗ ಸಹಾಯ ಮಾಡುತ್ತಾರೆ. ಒಂದು ಸಲ ಗುಂಡಿ ತೆಗೆಯುವಾಗ ಹಾರೆ ಕಾಲಿಗೆ ನಾಟಿ ಏಟು ಮಾಡಿಕೊಂಡು ನಂತರ ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಹಾಕಿಸಿಕೊಂಡು ಬಂದು ಮತ್ತೆ ಗುಂಡಿ ತೆಗೆದಿದ್ದರಂತೆ. ಈಗ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದಾರಂತೆ. ಅದನ್ನು ಬಿಟ್ಟು ಇನ್ಯಾವುದೇ ರೋಗ ಇಲ್ಲ. 65 ನೇ ವರ್ಷದಲ್ಲೂ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.
ರುದ್ರ ಭೂಮಿಯಲ್ಲೇ ವಾಸ: ನೀಲಮ್ಮ ಅವರು ರುದ್ರಭೂಮಿಯಲ್ಲೇ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಆದರೂ ಸಹ ಇವರು ಭಯವಿಲ್ಲದೆ ಆತ್ಮ ಶುದ್ಧಿ ಇದ್ದರೆ ಎಲ್ಲಿದ್ದರೂ ಭಯವಿಲ್ಲ ಎಂದು ತಮ್ಮ ಮಕ್ಕಳು, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಸಂತೋಷವಾಗಿದ್ದಾರೆ. ಬದುಕ್ಕಿದ್ದಾಗಲೂ ನಾನು ಗಂಡನ ಜೊತೆ ಇದ್ದೆ. ನನ್ನ ಗಂಡ ಸತ್ತ ನಂತರ ಅವರ ಜೊತೆಯಲ್ಲೇ ಇದ್ದೇನೆ. ಅವರ ಶವವನ್ನ ಮನೆಯ ಪಕ್ಕದಲ್ಲೇ ಮಣ್ಣು ಮಾಡಲಾಗಿದೆ ಎಂದು ತಿಳಿಸಿದರು.
ಜನರ ಹತ್ತಿರ ಎಲ್ಲ ಇರುತ್ತೆ. ಆದರೆ, ನೆಮ್ಮದಿ ಇರುವುದಿಲ್ಲ. ಚಿಂತೆ, ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ತಪ್ಪು ನಮ್ಮ ಹತ್ತಿರ ಇರುವುದರಲ್ಲೇ ಖುಷಿಯಿಂದ ನೆಮ್ಮದಿಯಿಂದ ಇದ್ದರೆ ಸಾಕು. ನಮಗೆ ಯಾವುದೇ ಆಸ್ತಿ ಇಲ್ಲ. ಈ ಸ್ಮಶಾಣವೂ ನಮ್ಮದಲ್ಲ. ನಾನು ಬಿಸಿಲು ಮಳೆಯಲ್ಲೂ ಗುಂಡಿ ತೆಗೆದುಕೊಂಡು ಮಕ್ಕಳು, ಸೊಸೆ, ಮೊಮ್ಮಕ್ಕಳೊಂದಿಗೆ ಖುಷಿಯಾಗಿ ನೆಮ್ಮದಿಯಿಂದ ಇದ್ದೇನೆ ಎನ್ನುತ್ತಾರೆ.
ಇವರಿಗೆ ರುದ್ರ ಭೂಮಿ ಬಿಟ್ಟು ಹೊರಗಡೆ ಹೋದರೆ ಮನಸ್ಸಿಗೆ ಏನೋ ಒಂದು ರೀತಿಯ ಭಾರವಂತೆ. ಸ್ಮಶಾನದ ಒಳಗೆ ಇದ್ದರೆ ನೆಮ್ಮದಿಯಿಂದ ಇರುತ್ತಾರಂತೆ. ಜೊತೆಗೆ ನೀಲಮ್ಮ ಅವರು ಹಾಗೂ ಮಕ್ಕಳು ಮೆಡಿಕಲ್ ಕಾಲೇಜಿಗೆ ದೇಹ ದಾನವನ್ನು ಮಾಡಿದ್ದು, ನಾನು ಬದುಕಿರುವಾಗ ಯಾವುದೇ ದಾನ ಮಾಡಿಲ್ಲ. ನನಗೆ ಆ ಶಕ್ತಿ ಇಲ್ಲ. ನಾನು ಸತ್ತ ನಂತರ ನನ್ನ ದೇಹವನ್ನು ದಾನ ಮಾಡಿದ್ದೇನೆ. ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗಲಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಆದ್ಯತೆಯ ಮೇಲೆ ನೀರಾವರಿ ಇಲಾಖೆ ಬಾಕಿ ಬಿಲ್ಗಳ ಪಾವತಿ: ಸಚಿವ ಕಾರಜೋಳ