ಮೈಸೂರು: ಶಕ್ತಿಧಾಮದ ಮಕ್ಕಳನ್ನು ಅನಾಥರೆಂದು ಕರೆಯಬಾರದು. ಇವರು ದೇವರ ಮಕ್ಕಳು. ಹೆಣ್ಣು ಮಕ್ಕಳ ಅಭಿವೃದ್ಧಿಗೆ ಬಜೆಟ್ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿದ್ದೇನೆ. ಹಾಗೆಯೇ ಶಕ್ತಿಧಾಮಕ್ಕೂ ಸರ್ಕಾರ 5 ಕೋಟಿ ರೂಪಾಯಿ ನೀಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮೈಸೂರಿನ ಶಕ್ತಿಧಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇನ್ಫೋಸಿಸ್ ಫೌಂಡೇಶನ್ ಕಟ್ಟಡದ ಲೋಕಾರ್ಪಣೆ ಹಾಗೂ ಶಕ್ತಧಾಮದ ವಿದ್ಯಾಶಾಲಾ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜನ್ಮ ಪೂರ್ವದ ಸಂಬಂಧ ಇರುವುದು ತಾಯಿ ಜೊತೆ ಇದೆ. ಈ ಸಂಬಂಧ ಎಲ್ಲವನ್ನೂ ಕೊಟ್ಟು ಬೆಳೆಸುತ್ತದೆ. ದುರ್ದೈವ ಮತ್ತು ನೋವಿನ ಸಂಗತಿ ಅಂದರೆ ಹೆಣ್ಣಿನ ಶೋಷಣೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಯೋಗ ಕೂಡಿ ಬಂದು ಶಕ್ತಿಧಾಮ ಬೆಳೆಯುತ್ತಿದೆ. ಸರ್ಕಾರ ಮತ್ತು ಸಮಾಜ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಪುನೀತ್ ರಾಜ್ಕುಮಾರ್ಗೆ ತಾಯಿ ಕರುಳು ಇತ್ತು. ನಮ್ಮನ್ನೆಲ್ಲಾ ಅಗಲಿದ್ದರೂ ಎಲ್ಲೋ ಕುಳಿತು ಶಕ್ತಿ ತುಂಬುತ್ತಿದ್ದಾನೆ. ಬದುಕಿನ ಬ್ಯಾಲೆನ್ಸ್ ಶೀಟ್ನಂತೆ ನಾವು ಬೆಳೆಯುತ್ತೇವೆ, ಬ್ಯಾಲೆನ್ಸ್ ಮಾಡಿಕೊಂಡು ಹೋದವರಿಗೆ ಸಂತೃಪ್ತಿ ಇರುತ್ತದೆ. ಪ್ರತಿಯೊಬ್ಬರೂ ಇದನ್ನು ರೂಢಿಸಿಕೊಳ್ಳಬೇಕು ಎಂದು ಪುನೀತ್ ಅವರನ್ನು ಸ್ಮರಿಸಿದರು.