ಮೈಸೂರು: ಬಡತನವೆಂದು ಕುಗ್ಗದೆ, ಸ್ವಂತ ಉದ್ಯೋಗ ಮಾಡಬೇಕೆಂಬ ಹಂಬಲದಿಂದ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್ ಕಲಿತು ಸಂಸಾರದ ನೊಗ ಹೊತ್ತಿರುವ ಮಹಿಳಾ ಆಟೋ ಚಾಲಕಿಯ ಯಶೋಗಾಥೆ ಇಲ್ಲಿದೆ...
ಕುಟುಂಬದ ಕಲಹದಿಂದ ಮನನೊಂದಿದ್ದ ಗೀತಾ ಎಂಬ ಮಹಿಳೆ ಐದು ವರ್ಷಗಳ ಕಾಲ ಒಡನಾಡಿ ಸಂಸ್ಥೆಯಲ್ಲಿದ್ದರು. ನಂತರ ಮೂರು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಹೋಂಗಾಡ್೯ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸರಿಯಾಗಿ ಸಂಬಳ ಸಿಗುತ್ತಿರಲಿಲ್ಲ, ಕೆಲ ದಿನಗಳಿಂದ ಹೋಂ ಗಾಡ್೯ ಕೆಲಸದಿಂದ ರಿಲೀವ್ ಮಾಡಿದರು.
ತಂದೆ-ತಾಯಿ ಜೊತೆ ಜೀವನ ಸಾಗಿಸುತ್ತಿರುವ ಗೀತಾಗೆ, ಒಂದರ ಮೇಲೆ ಒಂದು ಕಷ್ಟಗಳು ಆರಂಭವಾಗತೊಡಗಿದವು. ಒಡನಾಡಿ ಸಂಸ್ಥೆಯ ಬಳಿ ತನ್ನ ಕಷ್ಟಗಳನ್ನು ಹೇಳಿಕೊಂಡಾಗ, ಅವರು ಧೈರ್ಯ ತುಂಬಿ ಎಲೆಕ್ಟ್ರಿಕ್ ಆಟೋವನ್ನು ಲೋನ್ ಮೇಲೆ ಕೊಡಿಸಿದ್ದಾರೆ. ಸ್ಕೂಟರ್ ಓಡಿಸಿ ಅಭ್ಯಾಸ ಮಾಡಿಕೊಂಡಿದ್ದ ಗೀತಾ, ಒಂದು ವಾರದಲ್ಲಿಯೇ ಆಟೋ ಚಾಲನೆ ಮಾಡುವುದನ್ನು ಕಲಿತುಕೊಂಡು ವೃತ್ತಿಪರ ಆಟೋ ಚಾಲಕರಿಗಿಂತ ಕಮ್ಮಿ ಇಲ್ಲವೆಂಬಂತೆ ಆಟೋ ಓಡಿಸುತ್ತಿದ್ದಾರೆ.
ಏರುತ್ತಿರುವ ತೈಲ ಬೆಲೆ:
ದಿನೇ ದಿನೇ ಪೆಟ್ರೋಲ್, ಡಿಸೇಲ್ ಹಾಗೂ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿರುವುದರಿಂದ, ತೈಲ ಬಳಕೆಯಾಗುವ ಆಟೋ ಖರೀದಿ ಮಾಡಿದರೆ ಆರ್ಥಿಕ ಹೊರೆ ಬೀಳಲಿದೆ. ಈ ಬಗ್ಗೆ ಆಲೋಚಿಸಿದ ಗೀತಾ ಚಾರ್ಜೆಬಲ್ ಎಲೆಕ್ಟ್ರಿಕ್ ಆಟೋ ಖರೀದಿಸಿದ್ದಾರೆ. 7 ತಾಸು ಬ್ಯಾಟರಿ ಚಾಜ್೯ ಮಾಡಿದರೆ 50ಕ್ಕೂ ಹೆಚ್ಚು ಕಿ.ಮೀ. ಆಟೋ ಓಡುತ್ತದೆಯಂತೆ. ಆಟೋ ವೃತ್ತಿಗಿಳಿದಿರುವ ಗೀತಾಗೆ, ಸಹ ಆಟೋ ಡ್ರೈವರಗಳು ಸಾಥ್ ನೀಡುತ್ತಾರೆ. ಪ್ರಯಾಣಿಕರ ಬೇಡಿಕೆ ಎಲ್ಲಿ ಇದೆಯೋ ಆ ಸ್ಥಳಕ್ಕೆ ತೆರಳುವಂತೆ ಸಲಹೆ ಕೊಡುತ್ತಾರೆ.
ಬಡತನದಿಂದ ಬಸವಳಿದಿದ್ದ ಗೀತಾಗೆ ಆಟೋ ಚಾಲನೆ ಹೊಸ ವೃತ್ತಿಯಾದರೂ, ಬದುಕು ಕಟ್ಟಿಕೊಳ್ಳಬೇಕು ಎಂಬ ಛಲ ಇದೆ. ಕೆಲಸ ಹುಡುಕಿ ಅಲೆಯುವುದಕ್ಕಿಂತ ಸ್ವಂತ ಉದ್ಯೋಗ ಆರಂಭಿಸಿ ನೆಮ್ಮದಿಯ ಜೀವನ ಕಂಡುಕೊಳ್ಳಲು ಮುಂದಾಗಿದ್ದಾರೆ.