ಮೈಸೂರು: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ, ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಕೃಷಿ ಅಧಿಕಾರಿ ಮೋಸ ಮಾಡಿರುವ ಬಗ್ಗೆ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ರೈತ ಸಂಪರ್ಕ ಕಚೇರಿ ಅಧಿಕಾರಿ ಎನ್.ಕೆ.ವಿಕಾಸ್ ವಿರುದ್ಧ ನೊಂದ ಮಹಿಳೆ ದೂರು ನೀಡಿದ್ದಾರೆ.
2019ರಲ್ಲಿ ಪಿರಿಯಾಪಟ್ಟಣ ಕೃಷಿ ಇಲಾಖೆ ಕಚೇರಿಯಲ್ಲಿ ಹಂಗಾಮಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಪ್ರೀತಿಸುವ ನಾಟಕವಾಡಿ ಬಲೆಗೆ ಬೀಳಿಸಿಕೊಂಡ ಕೃಷಿ ಅಧಿಕಾರಿ ಆರಂಭದಲ್ಲಿ ಆಕೆಯ ಜೊತೆ ಹಲವೆಡೆ ಸುತ್ತಾಡಿದ್ದಾನೆ. ನಂತರ ಮದುವೆ ಆಗುವುದಾಗಿ ನಂಬಿಸಿ ಅನೇಕ ಸಲ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದರಿಂದ ಮಹಿಳೆ ಗರ್ಭಿಣಿ ಆಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಲಾಗಿದೆ.
ಬಳಿಕ ಮದುವೆಯಾಗುವಂತೆ ಬೇಡಿಕೊಂಡರೂ ಒಪ್ಪದ ಅಧಿಕಾರಿಯ ನಡೆಯಿಂದ ಬೇಸರಗೊಂಡ ಮಹಿಳೆ ವಿಷ ಸೇವಿಸಿದ್ದಾಳೆ. ತದನಂತರ ಪೋಷಕರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚೇತರಿಕೆ ನಂತರವೂ ಮಹಿಳೆ ಮತ್ತೆ ಅಧಿಕಾರಿಗೆ ಕರೆ ಮಾಡಿ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ ತಾನು ಬೇರೆಡೆಗೆ ವರ್ಗಾವಣೆ ಆಗಿದ್ದೇನೆ. ಏನು ಬೇಕಾದರೂ ಮಾಡಿಕೋ, ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಸುಮ್ಮನಿರುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಮಹಿಳೆಗೆ ಮೋಸ, ಬೆದರಿಕೆ ಕುರಿತಂತೆ ಮೈಸೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯುವತಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತನ ಕೊಲೆ: ಇಬ್ಬರ ಬಂಧನ