ಮೈಸೂರು: ಪೊಲೀಸರೆಂದರೆ ದಿನದ 24 ಗಂಟೆಯೂ ಕೆಲಸ ಮಾಡುವವರು. ಇಂತವರಿಗೆ ಸಮಯವೇ ಇರುವುದಿಲ್ಲ. ಇದರ ನಡುವೆಯೂ ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ ಮಾಡುವ ಮೂಲಕ ನಾವೆಲ್ಲ ಕುಟುಂಬದ ಸದಸ್ಯರಂತೆ ಎಂದು ತೋರಿಸಿದ್ದಾರೆ ಬನ್ನೂರು ಠಾಣೆ ಪೊಲೀಸರು.
ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಪೊಲೀಸ್ ಠಾಣೆಯ ಪೊಲೀಸರು ತಮ್ಮ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸೀಮಂತ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಬನ್ನೂರು ಠಾಣೆಯಲ್ಲಿ ಕೆಲಸ ಮಾಡುವ ಧನಲಕ್ಷ್ಮೀಗೆ ಠಾಣೆಯ ಸಿಬ್ಬಂದಿ ತಮ್ಮ ಸ್ವಂತ ಸಹೋದರಿಯರಿಗೆ ಸೀಮಂತ ಮಾಡುವ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಆಗಿ ಕೆಲಸ ನಿರ್ವಹಿಸುತ್ತಿರುವ ಧನಲಕ್ಷ್ಮೀ ಹೆರಿಗೆ ರಜೆ ಪಡೆದು ಮನೆಗೆ ತೆರಳಲು ಮುಂದಾಗಿದ್ದರು. ಈ ಹಿನ್ನೆಲೆ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಮತ್ತು ಸಹೋದ್ಯೋಗಿಗಳು ಠಾಣೆಯಲ್ಲೇ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.