ಮೈಸೂರು: ಹೆಚ್.ಡಿ.ಕುಮಾರಸ್ವಾಮಿ ಅವರು ಅವಕಾಶ ಕೊಟ್ಟರೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ, ಗೆದ್ದು ತೋರಿಸುತ್ತೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಘು ಅಚಾರ್ ಹೇಳಿದರು. ಹುಣಸೂರಿನಲ್ಲಿಂದು ಮಾಜಿ ಶಾಸಕ ಜಿ.ಟಿ.ದೇವೆಗೌಡರನ್ನು ಭೇಟಿ ಮಾಡಿದ ನಂತರ ದಿವಂಗತ ದೇವರಾಜ ಅರಸು ಸಮಾಧಿಗೆ ಪೂಜೆ ಸಲ್ಲಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದರು.
ಮುಂದಿನ ದಿನಗಳಲ್ಲಿ ಈ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ನನಗೆ ಜೆಡಿಎಸ್‌ನಲ್ಲಿ ಈ ಬಾರಿ ಕುಮಾರಸ್ವಾಮಿ ಅವಕಾಶ ಕೊಟ್ಟರೆ ವರುಣಾದಿಂದ ಸ್ಪರ್ಧೆ ಮಾಡುತ್ತೇನೆ. ಚಿತ್ರದುರ್ಗದಿಂದ ನನ್ನ ಹೆಂಡತಿಯನ್ನು ಚುನಾವಣೆಗೆ ನಿಲ್ಲಿಸುತ್ತೇನೆ ಎಂದರು.
ನಾನು ವರುಣಾದಿಂದ ಸ್ಪರ್ಧಿಸಿ ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯನವರ ವಿರುದ್ಧ ಗೆದ್ದು ತೋರಿಸುತ್ತೇನೆ. ಮುಂದೊಂದು ದಿನ ಸಣ್ಣ ಜಾತಿಗಳಲ್ಲೂ ಸಿಎಂ ಆಗಬಹುದು. 197 ಸಣ್ಣ ಜಾತಿಯವರಿಗೆ ಕಾಂಗ್ರೆಸ್ ಒಂದೂ ಟಿಕೆಟ್ ಕೊಟ್ಟಿಲ್ಲ ಎಂದು ರಘು ಆಚಾರ್ ವಾಗ್ದಾಳಿ ನಡೆಸಿದರು.
ಜಿ.ಟಿ.ದೇವೇಗೌಡ ಹೇಳಿದ್ದೇನು?: ಜಿ.ಟಿ.ದೇವೇಗೌಡ ಮಾತನಾಡಿ, ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಒಂದು ತಿಂಗಳಿನಿಂದ ನಮ್ಮ ಹಾಗೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದ್ದರಿಂದ ಜೆಡಿಎಸ್ ಅಭ್ಯರ್ಥಿ ಬದಲಾಗುತ್ತಾರೆ ಎಂದು ಹೇಳಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪ್ರಾಮಾಣಿಕರು, ಶಾಸಕರು ಅಂಥವರು ಸಿಗೋದಿಲ್ಲ. ಇವತ್ತು ಚುನಾವಣೆಗಳ ವಾತಾವರಣ ನೋಡಿ, ಸ್ವಯಂ ಘೋಷಣೆಯಿಂದ ನಿವೃತ್ತಿ ಪಡೆದರು ಎಂದರು.
ಮೋದಿ ಕುಟುಂಬ ರಾಜಕಾರಣ ವಿರೋಧಿ: ಈಶ್ವರಪ್ಪ ರಾಜಕೀಯ ನಿವೃತ್ತಿ ಬಗ್ಗೆ ನನಗೆ ಗೊತ್ತಿಲ್ಲ. ಈಶ್ವರಪ್ಪನವರನ್ನು ನಿವೃತ್ತಿ ಎನ್ನಲು ಆಗುವುದಿಲ್ಲ. ಅವರು ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತಾರೆ. ಅವರ ಮಗನಿಗೆ ಟಿಕೆಟ್ ಕೊಟ್ಟರೂ ಸ್ಪರ್ಧೆ ಮಾಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣ ವಿರೋಧಿಯಾಗಿದ್ದು, ಬಿಜೆಪಿಯಲ್ಲಿ ಈ ರೀತಿ ನಿರ್ಧಾರ ಆಗಿರಬಹುದು ಎಂದು ಹೇಳಿದರು.
ಇದನ್ನೂಓದಿ: ಈಶ್ವರಪ್ಪ ನಿರ್ಣಯ ಮಾದರಿ, ಶೆಟ್ಟರ್ ಇದೊಂದು ಸಲ ಅಂದಿದ್ದಾರೆ, ಸವದಿಗೆ ದುಡುಕಬೇಡಿ ಎಂದಿದ್ದೇನೆ- ಸಿಎಂ