ಮೈಸೂರು : ಸರಗೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿನ ಜನ ನಿತ್ಯ ಕಾಡು ಪ್ರಾಣಿಗಳಿಂದ ತೊಂದರೆ ಅನುಭವಿಸಿಕೊಂಡೇ ಜೀವನ ನಿರ್ವಹಣೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಹಳೆಹೆಗ್ಗುಡಿಲು ಹಾಗೂ ಸುತ್ತಮುತ್ತಲ ಗ್ರಾಮದ ಜನರು ತಮ್ಮ ಬೆಳೆ ಕಾಪಾಡಿಕೊಳ್ಳಲು ಎಷ್ಟೇ ಕಷ್ಟಪಟ್ಟರು ಆನೆಗಳ ಹಿಂಡು ಎಲ್ಲವನ್ನು ತಿಂದು ನಾಶ ಮಾಡಿ ಹೋಗುತ್ತಿವೆ. ಗ್ರಾಮದಲ್ಲಿ ಈ ಮೊದಲಿನಿಂದ್ಲೂ ಇದೇ ತೊಂದರೆಯನ್ನು ಇಲ್ಲಿನ ಜನ ಅನುಭವಿಸಿಕೊಂಡು ಬರುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ.
ಈ ಗ್ರಾಮವು ಮೊಳೆಯೂರು ಹಾಗೂ ಸರಗೂರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಈ ಹಿನ್ನೆಲೆ ಬೆಳೆದ ಬೆಳೆ ಎಲ್ಲವೂ ಕಾಡು ಪ್ರಾಣಿಗಳ ಪಾಲಾಗುತ್ತಿದೆ.
ಶನಿವಾರ ರಾತ್ರಿ ಗೋಪಾಲಯ್ಯ ಹಾಗೂ ಮಲ್ಲಿಕಾರ್ಜುನಯ್ಯ ಎಂಬ ರೈತರ ಜಮೀನಿನ ಕಬ್ಬು, ತೆಂಗಿನ ಗಿಡ ಸೇರಿ ಮುಂತಾದ ಬೆಳೆಗಳನ್ನು ಕಾಡಾನೆಗಳು ತಿಂದು ನಾಶ ಪಡಿಸಿವೆ. ಇದೇ ರೀತಿ ಆನೆಗಳ ಹಾವಳಿ ಹೆಚ್ಚಾದ್ರೆ ಗ್ರಾಮಸ್ಥರೆಲ್ಲ ಸೇರಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಗ್ರಾಮದ ಮುಖಂಡರು ಎಚ್ಚರಿಸಿದ್ದಾರೆ.