ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಪ್ರತ್ಯೇಕ ಗ್ರಾಮಗಳಲ್ಲಿ ಕಾಡಾನೆಗಳು ಕಂಡು ಬಂದಿದ್ದು, ಅರಣ್ಯ ಸಿಬ್ಬಂದಿ ನೆರವಿನಿಂದ ಯಾವುದೇ ಅಪಾಯವಿಲ್ಲದೆ ಆನೆಗಳನ್ನು ಕಾಡಿಗೆ ಓಡಿಸಲಾಗಿದೆ.
ಬಳ್ಳೂರು ಹುಂಡಿ
ನಂಜನಗೂಡು ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದಿಂದ ರೈಲು ತಡೆಗೋಡೆ ದಾಟಿ ಬಳ್ಳೂರು ಹುಂಡಿ ಗ್ರಾಮದಲ್ಲಿ ಒಂಟಿ ಸಲಗ ತುಂಟಾಟ ನಡೆಸಿದೆ. ಈ ಕುರಿತು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಆನೆಯನ್ನು ಕಾಡಿಗಟ್ಟಿದರು.
ಮಲ್ಕುಂಡಿ
ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದ ಮಹಾದೇವಪ್ಪ ಎಂಬುವವರ ಜಮೀನಿನಲ್ಲೂ ಕಾಡಾನೆ ಬೆಳೆ ನಾಶಗೊಳಿಸಿದೆ. ನೀರಿನ ಡ್ರಮ್ಗೆ ದಂತದಿಂದ ಕಾಡಾನೆ ತಿವಿದಿದೆ. ನುಗು ಜಲಾಶಯದ ಪ್ರದೇಶದಿಂದ ಬಂದಿರುವ ಆನೆ, ಗ್ರಾಮಸ್ಥರಲ್ಲಿ ಕೆಲ ಗಂಟೆಗಳ ಕಾಲ ಆತಂಕ ಹುಟ್ಟಿಸಿತು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಬಂದ ದಾರಿಗೆ ವಾಪಸ್ ಕಳುಹಿಸಿದರು.