ಮೈಸೂರು: ರಾಜ್ಯದಲ್ಲೇ ಮೈಸೂರು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಹೆಚ್ಚಾಗಿದ್ದು, ಲಾಕ್‌ಡೌನ್ ಮುಂದುವರೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳು ಅನ್ ಲಾಕ್ ಆಗಿವೆ. ಆದರೆ ಮೈಸೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆಯಲು ಇಲ್ಲಿ ಈಗಲೂ 10 ಕ್ಕಿಂತ ಹೆಚ್ಚು ಪಾಸಿಟಿವ್ ರೇಟ್ ಇರುವುದು ಕಾರಣ. ಮೈಸೂರು ಜಿಲ್ಲೆಯಲ್ಲಿ ಕಳೆದೊಂದು ತಿಂಗಳ ಹಿಂದೆಯೇ ಪರಿಸ್ಥಿತಿ ಸರಿಯಿಲ್ಲ ಎಂದು ನಾನು ಹೇಳಿದ್ದೆ. ಮೇ ತಿಂಗಳೊಂದರಲ್ಲೇ 1 ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ಗ್ರಾಮಾಂತರ ಪ್ರದೇಶದ ಜನರು ಕ್ರಿಟಿಕಲ್ ಕಂಡಿಷನ್ನಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದರು.
ನಾವು ಕಳೆದ ತಿಂಗಳು ಸರಿಯಾದ ಯೋಜನೆ ರೂಪಿಸದೆ ಹೆಚ್ಚಿನ ಜನ ಸಾವನ್ನಪ್ಪಿದ್ದಾರೆ. ಆಡಳಿತ ವ್ಯವಸ್ಥೆಗೆ ಹಳ್ಳಿ ಕಡೆ ಹೋಗಬೇಕೆಂದು ನಾನು ಆಗಲೇ ತಿಳಿಸಿದ್ದೆ. ಈಗ ನೂತನವಾಗಿ ಜಿಲ್ಲಾಧಿಕಾರಿ ಆಗಿ ಬಂದಿರುವ ಬಗಾದಿ ಗೌತಮ್ ಇಲ್ಲಿನ ಪರಿಸ್ಥಿತಿ ಅರಿತುಕೊಂಡು ಸಮಾರೋಪಾದಿಯಲ್ಲಿ ಕಳೆದ 10 ದಿನಗಳಿಂದ ಕೆಲಸ ಮಾಡುತ್ತಿದ್ದು ಶೀಘ್ರವೇ ಪಾಸಿಟಿವ್ ರೇಟ್ 5 ಕ್ಕಿಂತ ಕಡಿಮೆಯಾಗಲಿದೆ. ಜಿಲ್ಲೆಯಲ್ಲಿ ಬೇಗ ಅನ್ ಲಾಕ್ ಕಾರ್ಯ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.