ಮೈಸೂರು : ಕೊರೊನಾ ಭೀತಿ ನಡುವೆಯೇ ಬಿಹಾರದಲ್ಲಿ ಅಮಿತ್ ಶಾ ಕಾರ್ಯಕ್ರಮ ಮಾಡಿದ್ದಾರೆ. ಅವರಿಗೆ ಒಂದು ರೂಲ್ಸ್, ನಮಗೇ ಒಂದು ರೂಲ್ಸಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಈ ರೀತಿ ಕೀಳು ಮಟ್ಟದ ರಾಜಕಾರಣ ಮಾಡ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಯೇ ಕಾರ್ಯಕ್ರಮ ನಡೆಸುತ್ತಿದ್ದೆವು. ಮೊದಲು ಮೌಖಿಕವಾಗಿ ಅನುಮತಿ ಕೇಳಿದಾಗ ಸರ್ಕಾರ ಒಪ್ಪಿತ್ತು.
ಪತ್ರದ ಮೂಲಕ ಅನುಮತಿ ಕೇಳಿದಾಗ ನಿರಾಕರಿಸಿದೆ. ಇದನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ಇನ್ನೊಮ್ಮೆ ಪತ್ರ ಕೊಡುವುದಾಗಲಿ, ಮನವಿ ಮಾಡುವುದಾಗಲಿ ಮಾಡುವುದಿಲ್ಲ. ಕಾಂಗ್ರೆಸ್ ಸಂಘಟನೆ ಆಗುತ್ತದೆಂಬ ಆತಂಕದಲ್ಲಿ ಬಿಜೆಪಿಯವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರೀಕ್ಷೆ ಬೇಡ ಎಂಬುವುದಕ್ಕೆ ನನ್ನ ವಿರೋಧವಿದೆ : ಎಸ್ಎಸ್ಎಲ್ಸಿ ಪರೀಕ್ಷೆ ಬೇಡ ಎಂಬುವುದಕ್ಕೆ ನನ್ನ ವಿರೋಧವಿದೆ. ಪರೀಕ್ಷೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಿ. ಪರೀಕ್ಷೆ ಬೇಡ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.