ಮೈಸೂರು: ತಾವು ಐದು ವರ್ಷ ಒಳ್ಳೆಯ ಆಡಳಿತ ನೀಡಿರುವುದಾಗಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದ್ರೆ 130 ಇದ್ದ ಕಾಂಗ್ರೆಸ್ ಸಂಖ್ಯಾಬಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ 78ಕ್ಕೆ ಯಾಕೆ ಇಳಿಯಿತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಿಲಿ ಅನ್ನೋ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಅಂತಾ ಕೆಲವರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದ್ದರು. ಆದ್ರೆ ಯಾವ ರೀತಿ ಆಡಳಿತ ನೀಡಿದ್ದಾರೆ. ದೇವರಾಜ ಅರಸು ಅವರನ್ನು ಜನ ಈಗಲೂ ನೆನೆಯುತ್ತಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಕೊಟ್ಟ ರೀತಿ ಆಡಳಿತ ಕೊಟ್ಟರೇ ಎಂದು ಮರು ಪ್ರಶ್ನೆ ಹಾಕಿದರು.
ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮತ್ತೆ ಸಿಎಂ ಆಗ್ತೀನಿ ಅಂತಾರೆ. ಇನ್ನೂ ನಾಲ್ಕು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಮತ್ತೆ ಚುನಾವಣೆ ಬಂದಾಗ ನೋಡೋಣ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದನ್ನ ಜನ ತೀರ್ಮಾನ ಮಾಡ್ತಾರೆ ಎಂದು ವಿಶ್ವನಾಥ್ ಹೇಳಿದರು.
ನಾನು ಕೂಡ ಅಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ಲಿ ಅಂತಾ ಸಾಕಷ್ಟು ತ್ಯಾಗ ಮಾಡಿದ್ದೆ. ಕಾಂಗ್ರೆಸ್‌ಗೆ ಅವರನ್ನು ಕರೆತಂದ್ವಿ, ಆದ್ರೆ ಸಿದ್ದರಾಮಯ್ಯ ಮಾಡಿದ್ದೇನು? ಅವರು ದೊಡ್ಡ ನಾಯಕ. ಹಾಗಾಗಿ ನಮ್ಮಂಥ ಶ್ರೀಸಾಮಾನ್ಯರು ಅವರ ಕಣ್ಣಿಗೆ ಕಾಣೋಲ್ಲ ಬಿಡಿ ಎಂದು ವಿಶ್ವನಾಥ್ ಕುಟುಕಿದರು.
ಇನ್ನು ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲ, ಸ್ಥಳೀಯ ಮುಖಂಡರಿಗೆ ಅವಕಾಶ ನೀಡಬೇಕು. ಚುನಾವಣೆಯಲ್ಲಿ ಜೆಡಿಎಸ್ ಪ್ರತೇಕವಾಗಿ ಸ್ಪರ್ಧಿಸಲಿದೆ. ಮೈತ್ರಿ ಆದರೆ ಸ್ಥಳೀಯ ನಾಯಕರಿಗೆ ಅವಕಾಶ ಸಿಗುವುದಿಲ್ಲ. ಸ್ಥಳಿಯರು ಸ್ಪರ್ಧಿಸಲು ನಾವು ನೀಡೊ ಅವಕಾಶ ಇದೊಂದೆ. ಹಾಗಾಗಿ ಮೈತ್ರಿ ಮಾಡಿಕೊಳ್ಳೊಲ್ಲ, ಅವಶ್ಯಕತೆ ಇದ್ರೆ ಕೆಲವು ಕಡೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ತಿಳಿಸಿದರು.