ಮೈಸೂರು: ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಎಂದು ನಮ್ಮ ಭಾರತವನ್ನು ಪರಿಗಣಿಸಲಾಗಿದೆ. ಅದರಲ್ಲೂ ಕರ್ನಾಟಕ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಖ್ಯಾತಿ ಪಡೆದಿತ್ತು. ಆದರೆ, ಈ ಪಟ್ಟ ಮಧ್ಯಪ್ರದೇಶಕ್ಕೆ ಹಸ್ತಾಂತರಗೊಂಡಿದೆ.
ಇಂದು ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಬಂಡೀಪುರ, ನಾಗರಹೊಳೆ ಪ್ರದೇಶ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಪ್ರದೇಶವಾಗಿವೆ. ಅದರೆ, ಈ ಭಾಗದಲ್ಲಿ ಹುಲಿಗಳ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಅವುಗಳ ವಾಸಸ್ಥಾನವಾದ ಕಾಡು ದಿನೇ ದಿನೆ ಕ್ಷೀಣಿಸುತ್ತಿದೆ.
ಕಳೆದ 10 ವರ್ಷಗಳ ಹಿಂದೆ 1 ಹುಲಿಗೆ 1ಕಿಲೋಮೀಟರ್ ಕಾಡಿನ ಸರಹದ್ದು ಇತ್ತು. ಆದರೆ, ಕಳೆದ ಎರಡು- ಮೂರು ವರ್ಷಗಳಿಂದ 1ಹುಲಿಗೆ 400 ರಿಂದ 500 ಮೀಟರ್ ಮಾತ್ರ ಸರಹದ್ದು ಇದ್ದು ಇದರಿಂದ ಹುಲಿಗಳ ಕಾದಾಟ ಹೆಚ್ಚಾಗಿದೆ. ಈ ಕಾರಣಕ್ಕಾಗಿಯೇ ಹುಲಿಗಳ ಸಾವಿನ ಸಂಖ್ಯೆಯೂ ಮುಂದುವರೆಯುತ್ತಲೇ ಇದೆ.
ಹುಲಿಯ ಜೀವನ ಕ್ರಮ ಹೇಗಿರುತ್ತೆ?
ಸಾಮಾನ್ಯವಾಗಿ ಹುಲಿ ಒಂಟಿ ಜೀವನ ನಡೆಸುವ ಪ್ರಾಣಿಯಾಗಿದೆ. ಅದರಲ್ಲಿ ಗಂಡು ಹುಲಿ ಹೆಚ್ಚಾಗಿ ಒಂಟಿ ಜೀವನ ನಡೆಸುತ್ತದೆ. ಆದರೆ, ಹೆಣ್ಣು ಹುಲಿ ಮರಿ ಹಾಕಿದ ನಂತರ ತನ್ನ ಮರಿಗಳನ್ನು ಒಂದು ವರ್ಷದಿಂದ ಒಂದೂವರೆ ವರ್ಷದ ವರೆಗೂ ಸಾಕಿ ಅದಕ್ಕೆ ಬೇಟೆ ಆಡುವುದನ್ನು ಕಲಿಸಿದ ನಂತರ ಎಲ್ಲಾ ಮರಿಗಳನ್ನು ಪ್ರತ್ಯೇಕವಾಗಿ ಮಾಡಿ, ಸರಹದ್ದುಗಳನ್ನು ಗುರುತಿಸಿ ಸ್ವತಂತ್ರವಾಗಿರುವಂತೆ ಮಾಡುತ್ತದೆ.
ಹುಲಿಯ ಆಯಸ್ಸು 10 ರಿಂದ 12 ವರ್ಷ ಆಗಿರುತ್ತದೆ. ಒಂದು ಹೆಣ್ಣು ಹುಲಿ ಒಂದು ಬಾರಿಗೆ 2 ರಿಂದ 3 ಮರಿಗಳಿಗೆ ಜನ್ಮ ನೀಡುತ್ತದೆ. ಅಪರೂಪಕ್ಕೆ 4 ಮರಿಗಳಿಗೆ ಜನ್ಮ ನೀಡಿದ್ದು ಉಂಟು ಎನ್ನುತ್ತಾರೆ ಹುಲಿಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಶ್ರೇಯಸ್ ದೇವನೂರು.
ಹೆಣ್ಣು ಹುಲಿ ತನ್ನ ಮರಿಗಳಿಗೆ ಬೇಟೆಯಾಡುವುದನ್ನು ಕಲಿಸಿಕೊಡುವ ದೃಶ್ಯವನ್ನು ಶ್ರೇಯಸ್ ದೇವನೂರು ಸೆರೆಹಿಡಿದಿದ್ದು, ಅದನ್ನು ಈ ಟಿವಿ ಭಾರತಕ್ಕೆ ನೀಡಿದ್ದಾರೆ.