ಮೈಸೂರು: ಜೆಡಿಎಸ್ ಪಕ್ಷದ ಜಿ.ಟಿ. ದೇವೇಗೌಡ ಹಾಗೂ ಅನರ್ಹ ಶಾಸಕ ನಾರಾಯಣ ಗೌಡ ಹೇಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ಗೆ ಟಾಂಗ್ ನೀಡುವಂತೆ ಉತ್ತರ ನೀಡಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಶ್ಚರ್ಯಕರ ರೀತಿಯಲ್ಲಿ ನಿವೃತ್ತ ಕುಲಪತಿ ಫ್ರೊ. ಕೆ.ಎಸ್.ರಂಗಪ್ಪ ಅವರ ಮನೆಗೆ ಭೇಟಿ ನೀಡಿ ವಾಪಾಸ್ ತೆರಳುವ ವೇಳೆ ಮಾತನಾಡಿದರು. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರೇ ಬಿಜೆಪಿ ಪರ ಕೆಲಸ ಮಾಡುವಂತೆ ಹೇಳಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಜಿ.ಟಿ.ದೇವೇಗೌಡ ಹೇಳಿದ್ದು ಸತ್ಯ ಇರಬೇಕು ಎಂದಿದ್ದಾರೆ.
ಇನ್ನು ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣ ಗೌಡ ಸತ್ಯ ಹೇಳಿದ್ದಾರೆ. ನಾವೇನಾದರೂ ಹೇಳಿದ್ದರೆ ಬಣ್ಣ ಕಟ್ಟುತ್ತಿದ್ದರು. ಇದರಿಂದ ಜನರಿಗೆ ಸತ್ಯ ಏನೆಂಬುದು ಗೊತ್ತಾಗುತ್ತದೆ ಎಂದಿದ್ದಾರೆ. ಇನ್ನೂ ಈಶ್ವರಪ್ಪ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟುಬಿಟ್ಟಿದ್ದೇನೆ ಎಂದ ಅವರು, ಕನ್ನಡದಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಅದನ್ನು ಬಿಟ್ಟು ಹಿಂದಿ ಭಾಷೆ ಹೇರುವುದನ್ನು ವಿರೋಧಿಸುತ್ತೇನೆ ಎಂದರು.
ರಾಷ್ಟ್ರದಲ್ಲಿ ಹಿಂದಿ 1 ಭಾಷೆ, ಕನ್ನಡವೂ 1 ಭಾಷೆ ಎಲ್ಲಾ ಭಾಷೆಗಳನ್ನು ಕಲಿಯುವುದಕ್ಕೆ ಅವಕಾಶವಿದೆ. ಅದನ್ನು ಬಿಟ್ಟು ಬಲವಂತವಾಗಿ ಹಿಂದಿ ಹೇರಿಕೆ ಸರಿಯಲ್ಲ. 45 ದಿನ ಕಳೆದರೂ ಕೇಂದ್ರ ಸರ್ಕಾರ ಯಾವುದೇ ರೀತಿಯ ಪರಿಹಾರ ನೀಡಿಲ್ಲ ಎಂದು ಹೇಳುವ ಮೂಲಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಬಗ್ಗೆ ಜಿ.ಟಿ.ದೇವೇಗೌಡ ಹೇಳಿಕೆ ನಿಜವಿರಬಹುದು, ಹುಣಸೂರಿನಲ್ಲಿ ನಾವೇ ಗೆಲ್ಲುತ್ತೇವೆ ಎಂದರು.