IPL Retain: 'ಮಿಲಿಯನ್ ಡಾಲರ್ ಟೂರ್ನಿ' ಎಂದೇ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಆಡಬೇಕೆಂಬುದು ಬಹುತೇಕ ಎಲ್ಲಾ ದೇಶಿ, ವಿದೇಶಿ ಕ್ರಿಕೆಟಿಗರ ಬಯಕೆ. ಆದರೆ ಈ ಅವಕಾಶ ಎಲ್ಲರಿಗೂ ಸಿಗಲ್ಲ. ಒಮ್ಮೆ ಚಾನ್ಸ್ ಸಿಕ್ಕರೆ ಆ ಆಟಗಾರನ ಬದುಕೇ ಬದಲಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ 2022ರಲ್ಲಿ ಅನ್ಸೋಲ್ಡ್ ಆಗಿದ್ದ ಆಟಗಾರ ಇದೀಗ 23 ಕೋಟಿ ರೂ.ಗೆ ರಿಟೇನ್ ಆಗಿರುವುದು.
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಅವರನ್ನು 2022ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಯಾವ ತಂಡಗಳೂ ಖರೀದಿಸಿರಲಿಲ್ಲ. ಆದರೆ, 2023ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ₹5.25 ಕೋಟಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿತ್ತು. ಹಣಕ್ಕೆ ತಕ್ಕಂತೆ ಕ್ಲಾಸೆನ್ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದರಿಂದಾಗಿ 2025ರ ರಿಟೇನ್ ಆಟಗಾರನಾಗಿ ಸನ್‌ರೈಸರ್ಸ್ ತಂಡ 23 ಕೋಟಿ ರೂ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ.
ನಾಯಕ ಪ್ಯಾಟ್ ಕಮಿನ್ಸ್ ಹೊರತುಪಡಿಸಿದರೆ ಸನ್‌ರೈಸರ್ಸ್ ಅತೀ ಹೆಚ್ಚು ಮೊತ್ತವನ್ನು ಹೆನ್ರಿಚ್ ಕ್ಲಾಸೆನ್‌ಗೆ ನೀಡುತ್ತಿದೆ. ಇದಕ್ಕೂ ಮೊದಲು ಕೂಡ ಕ್ಲಾಸೆನ್ 2018ರಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿದ್ದರು. ಅದಾದ ಬಳಿಕ 2019ರ ಹರಾಜಿನಲ್ಲಿ ಆರ್ಸಿಬಿ ಖರೀದಿಸಿತ್ತು. ಆರ್ಸಿಬಿ ಪರ ಕೇವಲ 3 ಪಂದ್ಯಗಳನ್ನು ಆಡಿದ ಕ್ಲಾಸೆನ್ 4.50ರ ಸರಾಸರಿಯಲ್ಲಿ 9 ರನ್ ಗಳಿಸಿದ್ದರು.
ಕ್ಲಾಸೆನ್ ಐಪಿಎಲ್ ದಾಖಲೆ: ಇದುವರೆಗೆ 35 ಐಪಿಎಲ್ ಪಂದ್ಯಗಳನ್ನಾಡಿರುವ ಕ್ಲಾಸೆನ್ 38.19 ಸರಾಸರಿಯಲ್ಲಿ 993 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 6 ಅರ್ಧ ಶತಕಗಳು ಸೇರಿವೆ. 104 ಇವರ ಹೈಸ್ಕೋರ್ ಆಗಿದೆ.
ಸನ್‌ರೈಸರ್ಸ್ ರಿಟೇನ್ ಆಟಗಾರರ ವಿವರ: ಹೆನ್ರಿಚ್ ಕ್ಲಾಸೆನ್ (₹23 ಕೋಟಿ), ಕಳೆದ ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಪ್ಯಾಟ್ ಕಮಿನ್ಸ್ (₹18 ಕೋಟಿ), ಅಭಿಷೇಕ್ ಶರ್ಮಾ (₹14 ಕೋಟಿ), ಟ್ರಾವಿಸ್ ಹೆಡ್ (₹14 ಕೋಟಿ), ನಿತೇಶ್ ರೆಡ್ಡಿ (₹6 ಕೋಟಿ)
ಪ್ಯಾಟ್ ಕಮಿನ್ಸ್: ಕಳೆದ ಹರಾಜಿನಲ್ಲಿ ಆಸ್ಟ್ರೇಲಿಯದ ಪ್ಯಾಟ್ ಕಮ್ಮಿನ್ಸ್ ಅವರನ್ನು ಹೆಚ್ಚಿನ ಮೊತ್ತಕ್ಕೆ ಖರೀದಿಸಿದ್ದ ತಂಡ ಈ ಬಾರಿ 18 ಕೋಟಿ ರೂ.ಗೆ ಉಳಿಸಿಕೊಂಡಿದೆ.
ಅಭಿಷೇಕ್ ಶರ್ಮಾ: ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಕೂಡ 14 ಕೋಟಿ ರೂ.ಗೆ ಉಳಿಸಿಕೊಂಡಿದ್ದಾರೆ.
ನಿತೀಶ್ ರೆಡ್ಡಿ: ಐಪಿಎಲ್ 2024ರ ಋತುವಿನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ನಿತೀಶ್ ರೆಡ್ಡಿ ಅವರನ್ನು ಸನ್‌ರೈಸರ್ಸ್ 6 ಕೋಟಿ ರೂ.ಗೆ ಉಳಿಸಿಕೊಂಡಿದೆ.
ಇದನ್ನೂ ಓದಿ: IPLಗೂ ಮುನ್ನವೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ವಿಕೆಟ್ ಕೀಪರ್