ಕನ್ನಡ ಚಿತ್ರರಂಗದ ಅತ್ಯಂತ ಬಹುಬೇಡಿಕೆ ತಾರೆಗಳ ಪೈಕಿ ಗುರುತಿಸಿಕೊಂಡಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಅಭಿನಯದ ಬಘೀರ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಕನ್ನಡಿಗರಿಂದ ಹೆಚ್ಚಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರಮಂದಿರಗಳಲ್ಲಿ 'ಬಘೀರ' ಪ್ರದರ್ಶನ ಮುಂದುವರಿಸಿದೆ. ಗಳಿಕೆ ಸಹ ಉತ್ತಮವಾಗಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಾ. ಸೂರಿ ನಿರ್ದೇಶನದ 'ಬಘೀರ' ನಾಲ್ಕು ದಿನಗಳಲ್ಲಿ 13.03 ಕೋಟಿ ರೂ. ಗಳಿಸುವಲ್ಲಿ (ನೆಟ್ ಕಲೆಕ್ಷನ್) ಯಶಸ್ವಿ ಆಗಿದೆ. ತೆರೆ ಕಂಡ ದಿನ 2.8 ಕೋಟಿ ರೂ. ಗಳಿಸಿತ್ತು. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಮತ್ತು ಆಪ್ತ ಮೂಲಗಳು ಕೊಟ್ಟ ಅಂಕಿ ಅಂಶದಲ್ಲಿ ಕೊಂಚ ಹೆಚ್ಚು ಕಡಿಮೆ ಇದೆ. ಸಿನಿಮಾ ಚಿತ್ರಮಂದಿರ ಪ್ರವೇಶಿಸಿದ ಮೊದಲ ದಿನ ಸುಮಾರು 5 ರಿಂದ 6 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ ಸಂಸ್ಥೆಯ ಆಪ್ತರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದರು. ಎಲ್ಲದಕ್ಕೂ ಚಿತ್ರದ ಹಿಂದಿರುವ ಭಾರತೀಯ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನು ಗಮನಿಸೋದಾದ್ರೆ, ಬಹುನಿರೀಕ್ಷೆಗಳೊಂದಿಗೆ ಬಂದ ಈ ಸೂಪರ್ ಹೀರೋ ಕಾನ್ಸೆಪ್ಟ್ನ ಸಿನಿಮಾ ಕನ್ನಡದಲ್ಲಿ ಮೊದಲ ದಿನ 2.55 ಕೋಟಿ ರೂಪಾಯಿ, ಎರಡನೇ ದಿನ 2.9 ಕೋಟಿ ರೂಪಾಯಿ, ಮೂರನೇ ದಿನ 3.2 ಕೋಟಿ ರೂಪಾಯಿ, ನಾಲ್ಕನೇ ದಿನ 2.96 ಕೋಟಿ ರೂಪಾಯಿ ಗಳಿಸಿದ್ದು, ಈವರೆಗೆ 11.61 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗಿನಲ್ಲೂ ಬಿಡುಗಡೆ ಆಗಿದ್ದು, ಮೊದಲ ದಿನ 0.5 ಕೋಟಿ ರೂಪಾಯಿ, ಎರಡನೇ ದಿನ 0.4 ಕೋಟಿ ರೂ., ಮೂರನೇ ದಿನ 0.3 ಕೋಟಿ ರೂ., ನಾಲ್ಕನೇ ದಿನ 0.22 ಕೋಟಿ ರೂ. ಮೂಲಕ ಒಟ್ಟು 1.42 ಕೋಟಿ ರೂಪಾಯಿ ಗಳಿಸಿದೆ.
ಇದನ್ನೂ ಓದಿ: ನಿಮ್ಮ 'ಬಘೀರ' ಒಟಿಟಿಗೆ ಎಂಟ್ರಿ: ಯಾವಾಗ, ಎಲ್ಲಿ ಸ್ಟ್ರೀಮಿಂಗ್?
ಬಘೀರ ಥಿಯೇಟರ್ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾ ಯಶಸ್ಸು ಸಾರುವಂತಹ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೇ, ಒಂದೇ ತಿಂಗಳಿಗೆ ಒಟಿಟಿ ಪ್ಲ್ಯಾಟ್ಪಾರ್ಮ್ ತಲುಪಲು ಸಹ ಬಘೀರ ಎದುರು ನೋಡುತ್ತಿದೆ. ನೆಟ್‍ಫ್ಲಿಕ್ಸ್‌ನಲ್ಲಿ ಬಘೀರ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆಯಂತೆ. ಡಿಸೆಂಬರ್ ಮೊದಲ ವಾರದ ವೇಳೆಗೆ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ನಿಂದ ಮಾನಸಾ ಔಟ್: ಮುಖವಾಡ ಕಳಚಿತು ವಿಡಿಯೋ; ಬೆನ್ನಿಂದೆ ಮಾತನಾಡಿದ್ದೆಲ್ಲವೂ ಸ್ಪರ್ಧಿಗಳ ಮುಂದೆ
ಅಕ್ಟೋಬರ್ 31ರಂದು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಚಿತ್ರವನ್ನು ಡಾ.ಸೂರಿ ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿ ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್ ಒಟ್ಟಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ಅವರು ಈ ಚಿತ್ರಕ್ಕೆ ಕಥೆ ಒದಗಿಸಿದ್ದು, ಡಾ.ಸೂರಿ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಚಿತ್ರಕಥೆ ಮತ್ತು ಡೈಲಾಗ್ಸ್ ಅನ್ನೂ ಬರೆದಿದ್ದಾರೆ. ಎ.ಜೆ ಶೆಟ್ಟಿ ಅವರ ಕ್ಯಾಮರಾ ಕೈಚಳಕ ಮತ್ತು ಚೇತನ್ ಡಿಸೋಜಾ ಅವರ ಆ್ಯಕ್ಷನ್ ಡೈರೆಕ್ಷನ್ ಈ ಚಿತ್ರಕ್ಕಿದೆ.