ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿರುವ 'ಜಯಲಕ್ಷ್ಮಿ ವಿಲಾಸ್' ಅರಮನೆಯು ಏಷ್ಯಾ ಖಂಡದಲ್ಲೇ ಪ್ರಮುಖ ಸ್ಥಾನ ಪಡೆದಿದೆ. ಅರಮನೆಯನ್ನು ಹಿಂದೂ, ಗ್ರೀಕ್ ಹಾಗೂ ಇಸ್ಲಾಮಿಕ್ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಅರಮನೆಯ ವಿಶೇಷತೆ ಕುರಿತು ವಸ್ತು ಸಂಗ್ರಹಾಲಯದ ಕ್ಯೂರೇಟರ್ ಆದ ಡಾ. ನಾಗರಾಜ್ ಅವರು 'ಈಟಿವಿ ಭಾರತ' ಕ್ಕೆ ಮಾಹಿತಿ ನೀಡಿದ್ದಾರೆ..
ಮೈಸೂರು ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ ಎಂದು ಕರೆಯಲ್ಪಡುತ್ತದೆ. ಜೊತೆಗೆ ಜಿಲ್ಲೆಯಲ್ಲಿ ಹಲವಾರು ಅರಮನೆಗಳು ಇರುವುದರಿಂದ ಇದನ್ನ ಅರಮನೆ ನಗರಿ ಎಂತಲೂ ಕರೆಯುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿರುವ ಜಯಲಕ್ಷ್ಮಿ ವಿಲಾಸ್ ಅರಮನೆಯಲ್ಲಿ 10 ನೇ ಚಾಮರಾಜ ಒಡೆಯರ್ ಅವರ ಹಿರಿ ಮಗಳು ಜಯಲಕ್ಷ್ಮಿ ಅಮ್ಮಣ್ಣಿ ವಾಸವಿದ್ದರು. ಇವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿಯಾಗಿದ್ದರು.
ಜಯಲಕ್ಷ್ಮಿ ವಿಲಾಸ್ ಅರಮನೆಯನ್ನ 1959 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಕುವೆಂಪು ಅವರ ಸಂದರ್ಭದಲ್ಲಿ ಅರಮನೆ ಹಾಗೂ ವಿವಿ ಗೆ 300 ಎಕರೆ ಭೂಮಿಯನ್ನು ಅರಮನೆಯವರಿಂದ ಖರೀದಿ ಮಾಡಲಾಗಿದ್ದು, 1969 ರ ಸಮಯದಲ್ಲಿ ಜವರೇಗೌಡ, ಹಾಗೂ ಪ್ರೊ. ಜಿ ಪರಮಶಿವಯ್ಯ ಅವರ ಪರಿಶ್ರಮದಿಂದ ಜಾನಪದ ಸಂಗ್ರಹಾಲಯವನ್ನು ಪ್ರಾರಂಭ ಮಾಡಲಾಯಿತು.
ಜಯಲಕ್ಷ್ಮಿ ವಿಲಾಸ್ ಅರಮನೆಯ ವಿಶೇಷತೆ: ಜಯಲಕ್ಷ್ಮಿ ವಿಲಾಸ್ ಅರಮನೆಯನ್ನು ಹಿಂದೂ, ಗ್ರೀಕ್ ಹಾಗೂ ಇಸ್ಲಾಮಿಕ್ ಶೈಲಿಯಲ್ಲಿ ವಿನ್ಯಾಸ ಹೊಂದಿದೆ. 398 ಕಿಟಕಿಗಳು, 290 ಬಾಗಿಲುಗಳು, 96 ಮರದ ಕಂಬಗಳನ್ನು ಒಳಗೊಂಡ ಬೃಹದಾಕಾರದ ಅರಮನೆಯಾಗಿದೆ. ಈ ಅರಮನೆಯು ಪ್ರತ್ಯೇಕ ಮೂರು ಕಟ್ಟಡಗಳನ್ನು ಒಳಗೊಂಡಿದ್ದು, ಒಂದರಿಂದ ಇನ್ನೊಂದು ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯನ್ನು ಹೊಂದಿವೆ. ಇದಕ್ಕೆ ಗಾಜಿನ ಮನೆ ಎಂದು ಹೆಸರಿಡಲಾಗಿದೆ. ಅರಮನೆ ಒಳಭಾಗದಲ್ಲಿ ಕೆತ್ತನೆಗಳಿಂದ ಕೂಡಿದ ದೊಡ್ಡ ಗಾತ್ರದ ಮರದ ಕಂಬಗಳಿರುವ ಹಾಲ್, ನೃತ್ಯ ಮಂಟಪ, ಅರಮನೆ ಖಜಾನೆ, ಕೊಣೆಗಳು, ಕಲ್ಯಾಣ ಮಂಟಪವನ್ನು ಒಳಗೊಂಡಿದೆ. ಅಂದಿನ ಕಾಲದಲ್ಲೇ ಅರಮನೆಯಲ್ಲಿ ಸ್ವಚ್ಛತೆಗೆ ಮಹತ್ವವನ್ನು ನೀಡಲಾಗಿದ್ದು, ವ್ಯವಸ್ಥಿತವಾದ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜಾನಪದ ಸಂಗ್ರಹಾಲಯ: ಜಯಲಕ್ಷ್ಮಿ ವಿಲಾಸ್ ಅರಮನೆಯು ದಕ್ಷಿಣ ಪೂರ್ವ ಏಷ್ಯಾ ಖಂಡದಲ್ಲೇ ಪ್ರಮುಖ ಸ್ಥಾನವನ್ನು ಪಡೆದಿದ್ದು, ಇಲ್ಲಿ ಪ್ರಾಚೀನ ವಸ್ತುಗಳ ಹಾಗೂ ಆ ಕಾಲದಲ್ಲಿ ಬಳಸುತ್ತಿದ್ದ ಸಾಮಗ್ರಿಗಳನ್ನು ಹೇರಳವಾಗಿ ಸಂಗ್ರಹಿಸಿಡಲಾಗಿದೆ. ಇಲ್ಲಿ ಜಾನಪದ, ಸಾಹಿತ್ಯ, ಬುಡಕಟ್ಟಿಗೆ ಸಂಬಂಧಿಸಿದ ಮರದ ಬುಟ್ಟಿ, ಮಣ್ಣಿನ ಮಡಿಕೆ ಕುಡಿಕೆಗಳು, ವೃತ್ತಿ ನಿರತ ವಸ್ತುಗಳು ಹಾಗೂ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದು ಮೈಸೂರಿನ ಪಾರಂಪರಿಕ ಅರಮೆನೆಯಾಗಿದೆ.
ಇದನ್ನೂ ಓದಿ: ಬೈಸಾಖಿ ಹಬ್ಬ ಆಚರಣೆ.. ಗೋಧಿ ಗದ್ದೆಯಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ ಸಿಖ್ಖರು - ವಿಡಿಯೋ