ಮೈಸೂರು: ಜಿಲ್ಲೆ ಸೇರಿದಂತೆ ರಾಜ್ಯದ ನಾಲ್ಕು ಪ್ರವಾಸಿ ತಾಣಗಳಲ್ಲಿ ಶೀಘ್ರವೇ ಹೆಲಿ ಟೂರಿಸಂ ಆರಂಭಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮಾಹಿತಿ ನೀಡಿದರು.
ಜಿಲ್ಲಾ ಪ್ರವಾಸದ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಮೈಸೂರು ಸೇರಿದಂತೆ ರಾಜ್ಯದ ನಾಲ್ಕು ಪ್ರವಾಸಿ ತಾಣಗಳಲ್ಲಿ ಹೆಲಿ ಟೂರಿಸಂ ಆರಂಭಿಸುವ ಬಗ್ಗೆ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದರು.
ರಾಜ್ಯದ ಪ್ರವಾಸಿ ಕೇಂದ್ರಗಳಲ್ಲಿ ಹೆಲಿ ಟೂರಿಸಂ ಪ್ರಾರಂಭ, ಮೈಸೂರಿನ ಹೋಟೆಲ್ಗಳನ್ನು ವಾಣಿಜ್ಯ ವ್ಯಾಪ್ತಿಯಿಂದ ಕೈಗಾರಿಕಾ ವ್ಯಾಪ್ತಿಗೆ ತರುವುದು, ಆ ಮೂಲಕ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲು ಚಿಂತನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ, ಅಂತರ್ ರಾಜ್ಯ ರಸ್ತೆ ತೆರಿಗೆ, ಒಂದು ದೇಶ ಒಂದು ತೆರಿಗೆ ಹಾಗೂ ಕೇರಳ ಮಾದರಿಯಲ್ಲಿ ರಸ್ತೆ ತೆರಿಗೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಮೈಸೂರು ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ನೀಡಲು ಸಿಎಂಗೆ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಶೌರ್ಯ ಪ್ರಶಸ್ತಿ ಪುರಸ್ಕೃತ ರಾಜ್ಯದ ವೀರ ಯೋಧರಿಗೆ ಸಿಹಿ ಸುದ್ದಿ ನೀಡಿದ ಸಿಎಂ
ಕೆ.ಆರ್.ಎಸ್ ಹಿಂಭಾಗದಲ್ಲಿ ಡಿಸ್ನಿಲ್ಯಾಂಡ್ ಯೋಜನೆಯನ್ನು ಜಾರಿಗೆ ತರುವ ಮುನ್ನ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ನನ್ನ ಬಗ್ಗೆ ವೈಯಕ್ತಿಕವಾಗಿ ಕೀಳಾಗಿ ಮಾತನಾಡಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ಮಾಡುವುದು ತಪ್ಪು ಎಂದು ನನಗೂ ಗೊತ್ತು ಎಂದು ಯೋಗೇಶ್ವರ್ ತಿಳಿಸಿದರು.