ಮೈಸೂರು: ವಿದ್ಯುತ್ ಇಲಾಖೆ ಅಧಿಕಾರಿಗೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆವಾಜ್ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಗಡೂರು ಗ್ರಾಮ ಪಂಚಾಯತ್ 4.74 ಕೋಟಿ ರೂ. ನೀರು ಹಾಗು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೆ ವಿದ್ಯುತ್ ಇಲಾಖೆ ಅಧಿಕಾರಿ ವಿರುದ್ಧ ಸಾರ್ವಜನಿಕರ ಎದುರಲ್ಲೇ ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಗರಂ ಆಗಿದ್ದ ಪ್ರಕರಣವನ್ನು ಯಾರೂ ಮರೆತಿಲ್ಲ. ಆದರೆ, ಶಾಸಕರ ಆವಾಜ್ಗೆ ಬೆದರಿದ ಅಧಿಕಾರಿ ದೀಪಕ್ ತಲೆ ಬಗ್ಗಿಸಿ ಜಾಗ ಖಾಲಿ ಮಾಡಿದ್ದರು.
ಇದೇ ಸಂದರ್ಭವನ್ನು ಬಳಸಿಕೊಂಡ ತಗಡೂರು ಗ್ರಾಮ ಪಂಚಾಯತ್ ಸದಸ್ಯರು ಶಾಸಕರ ಎದುರೇ ಕಿಡಿಕಾರಿದ್ದರು. ಗ್ರಾಮ ಪಂಚಾಯತ್ ಕಚೇರಿಗೆ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ ಅಂತ ಆರೋಪಿಸಿ ಯತೀಂದ್ರ ಸಿದ್ದರಾಮಯ್ಯ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಬೆಳಕಿಗೆ ಬರುತ್ತಿರುವ ವಿಚಾರ ಅಂದ್ರೆ ತಡಗೂರು ಗ್ರಾಮ ಪಂಚಾಯತ್ ವಿದ್ಯುತ್ ಹಾಗು ಕುಡಿಯುವ ನೀರು ವಿದ್ಯುತ್ ಬಿಲ್ ಮೊತ್ತ ಬರೋಬ್ಬರಿ ₹4.74 ಕೋಟಿ ಉಳಿಸಿಕೊಂಡಿದೆ ಅನ್ನೋದು ಗೊತ್ತಾಗಿದೆ.
ಅಧಿಕಾರಿ ವಲಯದಲ್ಲಿ ಪ್ರಶ್ನೆ..
ತಗಡೂರು ಸೇರಿದಂತೆ ತಗಡೂರು ಶಾಖೆಯ 7 ಗ್ರಾಮ ಪಂಚಾಯತ್ಗಳಿಂದ ಒಟ್ಟು ₹47 ಕೋಟಿಗೂ ಅಧಿಕ ಬಾಕಿ ಇದೆ. ಇಷ್ಟು ದೊಡ್ಡ ಮೊತ್ತವನ್ನ ವಸೂಲಿ ಮಾಡಲು ಅಧಿಕಾರಿ ಯತ್ನಿಸಿದ್ದು ತಪ್ಪಾ?. ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯತ್ ವಿದ್ಯುತ್ ಸಂಪರ್ಕ ಕಟ್ ಮಾಡಿದ್ರೆ, ಶಾಸಕರಿಗೇಕೆ ಸಿಟ್ಟು ಅಂತ ಅಧಿಕಾರಿ ವಲಯದಲ್ಲಿ ಪ್ರಶ್ನೆ ಎದ್ದಿದೆ.
ವಿದ್ಯುತ್ ಬಿಲ್ ಬಾಕಿ ವಸೂಲಿ ಮಾಡಲೇಬೇಕೆಂದು ಸರ್ಕಾರ ಇಲಾಖೆ ಅಧಿಕಾರಿಗಳಿಗೆ ಬೇಷರತ್ ಕಂಡಿಷನ್ ಹಾಕಿದೆ. ಬಾಕಿ ಕಟ್ಟದಿದ್ದಲ್ಲಿ ಸಂಪರ್ಕ ಕಟ್ ಮಾಡುವಂತೆ ಸೂಚನೆ ನೀಡಿದೆ. ಇಲಾಖೆ ಆದೇಶದಂತೆ ಕರ್ತವ್ಯ ನಿರ್ವಹಿಸಿದ ಅಧಿಕಾರಿ ದೀಪಕ್ಗೆ ಶಾಸಕರು ಬೆಂಬಲ ನೀಡಬೇಕಿತ್ತು. ಬದಲಾಗಿ ಗ್ರಾಮಪಂಚಾಯತ್ ಸದಸ್ಯರ ಪರವೇ ಬ್ಯಾಟ್ ಬೀಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪಂಗನಾಮ ಹಾಕಿದೆ ಎಂಬ ಅನುಮಾನ..
ಅಂದು ಯಾವ ಪುರುಷಾರ್ಥಕ್ಕಾಗಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೀಗೆ ಕೂಗಾಡಿದ್ರು?. ಅಲ್ಲದೆ, ಸರ್ಕಾರದಿಂದ ಗ್ರಾಮ ಪಂಚಾಯತ್ಗೆ ಪ್ರಸಕ್ತ ಸಾಲಿನ ವಿದ್ಯುತ್ ಹಾಗು ನೀರಿನ ಬಾಕಿ ಪಾವತಿಗೆ ಅನುದಾನ ಬಿಡುಗಡೆ ಆಗಿದೆ. ಏತಕ್ಕಾಗಿ ಪಾವತಿಸಿಲ್ಲ ಎಂದು ಗ್ರಾ.ಪಂ. ಅಧಿಕಾರಿಗಳಿಗೆ ಹಾಗು ಸದಸ್ಯರಿಗೆ ಪ್ರಶ್ನಿಸುವ ಬದಲು ಕ್ರಮ ಕೈಗೊಳ್ಳಲು ಬಂದ ಅಧಿಕಾರಿಗೆ ಆವಾಜ್ ಹಾಕಿ ಕಳುಹಿಸುವುದು ಯಾವ ಊರಿನ ನ್ಯಾಯ? ಕುಡಿಯುವ ನೀರು ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ಗೆ ಗ್ರಾಮ ಪಂಚಾಯತ್ ಪಂಗನಾಮ ಹಾಕಿದೆ ಎಂಬ ಅನುಮಾನ ಮೂಡಿದೆ.