ಮೈಸೂರು: ಮೋದಿ ಅಲೆಗೆ ತರಗೆಲೆ ತರ ಕೊಚ್ಚಿ ಹೋಗ್ತಿಯಾ ಪಕ್ಷ ಬಿಟ್ಟು ಹೋಗಬೇಡ ಅಂದಿದ್ದೆ. ಆದ್ರೆ ಸಿ.ಹೆಚ್. ವಿಜಯಶಂಕರ್ ಆಗ ನನ್ನ ಮಾತನ್ನು ಕೇಳಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮಯದಲ್ಲಿ ಪಕ್ಷ ಬಿಟ್ಟು ಹೋಗಬೇಡ ಎಂದು ನಾನೇ ಹೇಳಿದ್ದೆ. ಆದರೆ ನನ್ನ ಮಾತು ಕೇಳದೆ ಹೋಗಿದ್ದರು. ಆದರೀಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಅಥವಾ ಬೇಡವಾ ಎಂಬುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಈ ಬಗ್ಗೆ ತೀರ್ಮಾನವನ್ನು ಅವರೇ ಕೈಗೊಳ್ಳುತ್ತಾರೆ ಎಂದರು.
ಇನ್ನು ಬಿಜೆಪಿ ಸರ್ಕಾರದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ನಡೆಯುತ್ತಿದೆ. ಹಿಂದಿನ ಸಮ್ಮಿಶ್ರ ಸರ್ಕಾರ ನೆರೆ ಹಾವಳಿ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಂಡಿದೆ ಅನ್ನೋದು ಜನರಿಗೆ ಗೊತ್ತಿದೆ. ಮಳೆಯಿಂದ ಪದೇ ಪದೇ ಹಾನಿಗೊಳಗಾಗುವ ಪ್ರದೇಶಗಳನ್ನು ಸ್ಥಳಾಂತರ ಮಾಡಿ, ಜನರಿಗೆ ಶಾಶ್ವತ ಪರಿಹಾರಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.