ಮೈಸೂರು: ಮಳೆ ಹಾಗೂ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಆದಷ್ಟು ಬೇಗ ನಿವೇಶನ ಹಂಚಿಕೆ ಮಾಡಿ, ಮನೆಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
![V.Somanna instructed to Officers as build a home for neighboring victims as soon as possible](https://etvbharatimages.akamaized.net/etvbharat/prod-images/4367408_mysur.jpg)
ಇಂದು ಹೆಚ್.ಡಿ ಕೋಟೆ ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾದ ಬಿದರಹಳ್ಳಿ ಗ್ರಾಮದ ಗಂಜಿಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ, ಅಲ್ಲಿನ ಸುಮಾರು 41 ಕುಟುಂಬಕ್ಕೆ ಮಳೆಯಿಂದ ಅಪಾರ ನಷ್ಟವಾಗಿದ್ದು, ಶಾಶ್ವತ ಮನೆಗಳನ್ನು ನಿರ್ಮಿಸಿ ಸ್ಥಳಾಂತರ ಮಾಡಲು ಹೇಳಿದರು.
ಬಿದರಹಳ್ಳಿಯ ಹೊರ ವಲಯದಲ್ಲಿ ಮನೆ ನಿರ್ಮಿಸಲು ಸ್ಥಳವಿದ್ದು, ಅಲ್ಲಿ 20*30 ಅಥವಾ 30*30 ವಿಸ್ತೀರ್ಣದ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಬೇಕು. ಸಂತ್ರಸ್ತರಿಗೆ ಮನೆ ನಿರ್ಮಾಣ ಆಗುವ ತನಕ ಅವರಿಗೆ ಶೆಡ್ ನಿರ್ಮಿಸಲು 50 ಸಾವಿರ ರೂ.ನೀಡಲು ಉದ್ದೇಶಿಸಲಾಗಿತ್ತು. ಆದರೆ, 50 ಸಾವಿರ ರೂ.ಗಳನ್ನು ಸಂತ್ರಸ್ತರು ವೈಯುಕ್ತಿಕ ಸಮಸ್ಯೆಗಳಿಗೆ ಬಳಸಿಕೊಂಡರೆ ಸರ್ಕಾರದಿಂದ ನೀಡುವ ಹಣ ಸದುಪಯೋಗವಾಗುವುದಿಲ್ಲ. ಶೆಡ್ ನಿರ್ಮಿಸಲು ನೀಡಲಾಗುವ 50 ಸಾವಿರ ರೂ.ಗಳ ಜೊತೆ ಮನೆ ನಿರ್ಮಾಣ ಮಾಡಲು ನೀಡಲಾಗುವ 5 ಲಕ್ಷ ರೂ. ಸೇರಿಸಿ ಮನೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು, ನಿರಂಜನ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಹುಣಸೂರು ಉಪವಿಭಾಗಾಧಿಕಾರಿ ವೀಣಾ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.