ಮೈಸೂರು: ಏಷಿಯನ್ ಪೇಂಟ್ಸ್ ಕಾರ್ಖಾನೆಗಾಗಿ ಭೂಮಿ ನೀಡಿದ ರೈತರಿಗೆ ಉದ್ಯೋಗ ಸಿಗದ ಕಾರಣ ರೊಚ್ಚಿಗೆದ್ದ ಇಮ್ಮಾವು ಗ್ರಾಮಸ್ಥರು ನಾಮಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕರಿಸಿದ್ದಾರೆ.
ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಂಟ್ಸ್ ಕೈಗಾರಿಕೆಗೆ ಭೂಮಿ ನೀಡಿದ ರೈತರ ಕುಟುಂಬಸ್ಥರಿಗೆ ಉದ್ಯೋಗ ನೀಡುವಂತೆ ಕಳೆದ 23 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಲಾಗಿದೆ.
ಇದರಿಂದ ರೊಚ್ಚಿಗೆದ್ದ ಇಮ್ಮಾವು ಗ್ರಾಮಸ್ಥರು, ಹುಳಿಮಾವು ಗ್ರಾಮ ಪಂಚಾಯಿತಿಗೆ ಯಾರಾದರೂ ನಾಮಪತ್ರ ಸಲ್ಲಿಸಲು ಹೋಗುತ್ತಾರೆ ಎಂಬ ಆತಂಕದಿಂದ ಕಚೇರಿ ಮುಂದೆ ಮೂರು ದಿನ ಹಗಲುರಾತ್ರಿ ಎನ್ನದೇ ಅಲ್ಲೇ ಮೊಕ್ಕಾಂ ಹೂಡಿದ್ದಾರೆ.
ಓದಿ: ಮೈಸೂರು ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ: 123 ಮಂದಿ ಅವಿರೋಧ ಆಯ್ಕೆ, ಕಣದಲ್ಲಿ 6,165 ಅಭ್ಯರ್ಥಿಗಳು
ಎರಡನೇ ಹಂತದ ಗ್ರಾ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನವಾಗಿರುವುದರಿಂದ ಇಮ್ಮಾವು ಗ್ರಾಮದಿಂದ ಯಾರು ನಾಮಪತ್ರ ಸಲ್ಲಿಸದೇ ಚುನಾವಣೆ ಬಹಿಷ್ಕರಿಸಿದ್ದಾರೆ. ಗ್ರಾಮಸ್ಥರು ಮನವೊಲಿಕೆಗೆ ಬಂದ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಗಳ ಮಾತಿಗೂ ಬಗ್ಗದೇ ಹಠ ಹಿಡಿದಿದ್ದಾರೆ.