ಮೈಸೂರು: ಗ್ರಾಪಂ ಅಧ್ಯಕ್ಷೆಯೊಬ್ಬರು ತನ್ನ ಸ್ವಂತ ಜಮೀನಿನಲ್ಲಿ ಪೌರಕಾರ್ಮಿಕರನ್ನು ದುಡಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಕೇಳಿ ಬಂದಿದೆ.
ಮಲ್ಲಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ, ನಾಲ್ವರು ಪೌರಕಾರ್ಮಿಕರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ದೃಶ್ಯಗಳನ್ನ ಗ್ರಾಮಸ್ಥರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಟಿ.ನರಸೀಪುರ ತಾಲೂಕು ಕೆಂಪಯ್ಯನಹುಂಡಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಪುಟ್ಟರಾಜು, ಖುದ್ದಾಗಿ ಜಮೀನಿನಲ್ಲಿ ನಿಂತು ಪೌರಕಾರ್ಮಿಕರಿಂದ ಕೆಲಸ ಮಾಡಿಸುತ್ತಿರುವ ದೃಶ್ಯಗಳು ಫೋಟೋಗಳಲ್ಲಿ ಕಂಡು ಬಂದಿವೆ.
ಕಳೆದ ಹಲವು ದಿನಗಳಿಂದ ದಂಪತಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಪೌರಕಾರ್ಮಿಕರಿಂದ ಜಮೀನು ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಲ್ಲಿಪುರ ನಿವಾಸಿಗಳು, ಗ್ರಾಪಂ ಅಧ್ಯಕ್ಷೆ ರೋಹಿಣಿ ಸದಸ್ಯತ್ವ ವಜಾಗೊಳಿಸಿ, ಕಾರ್ಯದರ್ಶಿ ಪುಟ್ಟರಾಜು ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.