ಮೈಸೂರು: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಗೆ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಆದರೂ 3ನೇ ಎರಡರಷ್ಟು ಬಹುಮತ ಸಿಕ್ಕಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಇಂದು ನಗರದ ಜೆಎಸ್ಎಸ್ ವೈದ್ಯಕೀಯ ವಿದ್ಯಾರ್ಥಿಗಳ ದಶಮ ಘಟಿಕೋತ್ಸವದಲ್ಲಿ ಭಾಗವಹಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿ ಮಾತನಾಡಿದ ಅವರು, ದೇಶದಲ್ಲಿ ಈಗ ಜನಸಂಖ್ಯೆ ಹೆಚ್ಚಾಗಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಹೊರ ದೇಶಕ್ಕೂ ಹೋಗಿ ಕೆಲಸ ಮಾಡಿ. ಆದರೆ ಮಾತೃ ಭಾಷೆ, ಮಾತೃ ಭೂಮಿಯನ್ನು ಮರೆಯಬೇಡಿ ಎಂದರು.
ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿ ಬಗ್ಗೆ ಕುರಿತು ಮಾತನಾಡಿದ ಅವರು, 370ನೇ ವಿಧಿ ರದ್ಧತಿಗೆ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಆದರೂ 3ನೇ ಎರಡರಷ್ಟು ಬಹುಮತ ಸಿಕ್ಕಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಹೇಳಿಕೊಂಡರು.
ಕರ್ನಾಟಕದಲ್ಲಿ ಉತ್ತಮ ಪರಿಸರವಿದ್ದು, ರಾಜ್ಯ ಹಸಿರಿನಿಂದ ಕೂಡಿದೆ. ಇಂತಹ ರಾಜ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಒಳ್ಳೆಯ ಆಹಾರ ಪದ್ಧತಿಗಳಿದ್ದು, ಇಲ್ಲಿನ ರಾಗಿ ಮುದ್ದೆ, ನೀರ್ದೋಸೆ ತುಂಬಾ ಪ್ರಸಿದ್ಧಿ ಪಡೆದಿದೆ ಎಂದು ಕರ್ನಾಟಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಪ್ರತಿಯೊಬ್ಬರೂ ಯೋಗ ಮಾಡಿದರೆ ರೋಗದಿಂದ ದೂರವಿರಬಹುದು. ಯೋಗ ಆರೋಗ್ಯವನ್ನು ಕಾಪಾಡಲು ಮುಖ್ಯ. ಯೋಗ ಎಂಬುದು ಧರ್ಮದ ವಿಚಾರವಲ್ಲ. ಧರ್ಮದ ವಿಚಾರದಲ್ಲಿ ಯೋಗವನ್ನು ನೋಡಬಾರದು ಎಂದು ಹೇಳಿದರು.
ವೈದ್ಯಕೀಯ ಸೇವೆಯನ್ನು ನಗರ ಪ್ರದೇಶಕ್ಕೆ ಸೀಮಿತಗೊಳಿಸಬಾರದು. ಗ್ರಾಮೀಣ ಪ್ರದೇಶಗಳಲ್ಲೂ ವೈದ್ಯಕೀಯ ಸೇವೆ ನೀಡಲು ಯುವ ವೈದ್ಯರು ಮುಂದಾಗಬೇಕೆಂದು ವೈದ್ಯಕೀಯ ಪದವಿ ಪಡೆಯುತ್ತಿರುವ ಕಿರಿಯ ವೈದ್ಯರಿಗೆ ಉಪ ರಾಷ್ಟ್ರಪತಿಗಳು ಕಿವಿಮಾತು ಹೇಳಿದರು.
ಇನ್ನು ನಾವು ಯಾವುದೇ ದೇಶದ ಮೇಲೂ ದಾಳಿ ಮಾಡಿಲ್ಲ. ಆದರೆ ನಮ್ಮ ದೇಶದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ನಮ್ಮ ಪಕ್ಕದ ರಾಷ್ಟ್ರ ಭಯೋತ್ಪಾದನೆ ಮಾಡುತ್ತಿದೆ. ಆದರೂ ನಾವು ಅವರ ಜೊತೆ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತೇವೆ. ಎಲ್ಲರೂ ಸ್ನೇಹದಿಂದ ಇರಬೇಕೆಂಬುದು ನಮ್ಮ ದೇಶದ ಭಾವನೆಯಾಗಿದೆ ಎಂದರು.