ಮೈಸೂರು: ಸಿಂದಗಿ ಹಾಗೂ ಹಾನಗಲ್ನಲ್ಲಿ ನಡೆಯುತ್ತಿರುವುದು ಉಪಚುನಾವಣೆಯಲ್ಲ, ಮತದಾರರ ಮೇಲೆ ನಡೆಯುತ್ತಿರುವ ದರೋಡೆ. ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿರುವುದನ್ನು ನೋಡಿದರೆ, ಇದು ಉಪಚುನಾವಣೆ ಹೆಸರಿನಲ್ಲಿ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಎನ್ನಿಸುತ್ತದೆ. ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಮತದಾರರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.
ಡೀಸೆಲ್, ಗ್ಯಾಸ್ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಜನ ತತ್ತರಿಸಿದ್ದಾರೆ. ಸಮಾನ ಮನಸ್ಕರೆಲ್ಲಾ ಬೆಲೆ ಏರಿಕೆ ವಿರುದ್ಧ ಬೀದಿ ಹೋರಾಟಕ್ಕೆ ಮುಂದಾಗಬೇಕು. ಹೀಗೆ ಬೆಲೆ ಏರುತ್ತಿದ್ದರೆ ಜನಸಾಮಾನ್ಯರ ಗತಿಯೇನು? ಎಂದು ಪ್ರಶ್ನಿಸಿದರು.
ಮೋದಿ 100 ಕೋಟಿ ಡೋಸ್ ಕೊಟ್ಟಿದ್ದೀವಿ ಅಂತಾ ಹೇಳುತ್ತಿದ್ದಾರೆ. ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇದೀಗ ಸೀಮೆಎಣ್ಣೆಯ ಬೆಲೆ ಜೊತೆಗೆ ಲಭ್ಯತೆಯು ಸಹ ಇಲ್ಲದಾಗಿದೆ. ಇದರ ವಿರುದ್ಧ ಬೀದಿ ಹೋರಾಟ ಆಗಬೇಕು. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಹಾಗೂ ಮಹಿಷಿ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಓದಿ: ಬೆಂಗಳೂರಲ್ಲಿ ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷಿನ್ ಅರ್ಧಕ್ಕೆ ಕಟ್... ತಪ್ಪಿದ ಅನಾಹುತ