ಮೈಸೂರು: ಮೈಸೂರು ದಸರಾ ಹೋಗಿ, ಯಡಿಯೂರಪ್ಪ ದಸರಾ ಆಗಿದೆ. ಯಡಿಯೂರಪ್ಪನವರಿಗೆ ನಮ್ಮ ಸಾಂಸ್ಕೃತಿಕ ದಸರಾ ಬೇಕಾಗಿಲ್ಲ. ಸಿಎಂ ಯಡಿಯೂರಪ್ಪ ಪಕ್ಷಾಂತರ ಪಿತಾಮಹ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ದಸರಾವನ್ನು ಆಚರಿಸಬೇಕು ಎಂದು ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದ್ಧೂರಿ ದಸರಾ ಉತ್ಸವ ನಡೆಸಲೇಬೇಕು. ನಡೆಸದಿದ್ದರೆ ಜಂಬೂ ಸವಾರಿ ದಿನದಂದು ಸಾರೋಟ್‌ನಲ್ಲಿ ಚಾಮುಂಡೇಶ್ವರಿ ವಿಗ್ರಹವಿಟ್ಟು ಬನ್ನಿ ಮಂಟಪದವರೆಗೆ ಸಾಗುವೆ ಎಂದು ಹೇಳಿದರು.
ದಸರಾಗೆ ಲೈಟ್ ಬೇಕು, ಆದರೆ ಜಂಬೂ ಸವಾರಿ ಬೇಡ. ಇದು ಹುಚ್ಚರ ಸರ್ಕಾರ. ದಿನಕ್ಕೊಬ್ಬ ಮಂತ್ರಿ ಮೈಸೂರಿಗೆ ಬರುತ್ತಾರೆ. ವಿರೋಧ ಪಕ್ಷಕ್ಕೆ ಪಾಸಿಟಿವ್ ಬಂದಿದೆ. ಇವರೆಲ್ಲರೂ ದಸರಾ ಉತ್ಸವಕ್ಕೆ ಮಂಕು ಬಡಿಸಿದ್ದಾರೆ. ದಸರಾ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಇದೆ ನಿಜ. ಆದರೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹಬ್ಬ ಮಾಡಬಹುದಾಗಿತ್ತು. ಯಡಿಯೂರಪ್ಪನವರಿಗೆ ಕೇವಲ ಸರ್ಕಾರ ಉಳಿಸಿಕೊಳ್ಳುವುದು, ಮಂತ್ರಿಗಿರಿ ಹಂಚುವುದು ಇದಿಷ್ಟೇ ಗೊತ್ತಿರುವುದು ಎಂದು ಬಿಎಸ್‌ವೈ ವಿರುದ್ಧ ಲೇವಡಿ ಮಾಡಿದರು.
ವಿದ್ಯಾಗಮವನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು. ಕೊರೊನಾದಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿ ಸತ್ತರೆ ಒಂದು ಕೋಟಿ ಪರಿಹಾರ ಕೊಡಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಒತ್ತಾಯಿಸಿದರು.