ಮೈಸೂರು : ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವುದನ್ನು ವಿರೋಧಿಸಿ, ತಲೆಯ ಮೇಲೆ ಖಾಲಿ ಕೊಡಗಳನ್ನು ಇಟ್ಟುಕೊಂಡು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ವಿನೂತನವಾಗಿ ನಗರದ ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಮಳೆ, ನೀರು ನಿಲ್ಲದೇ ಬಹಳ ಗಂಭೀರವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ, ವಿರೋಧ ಪಕ್ಷದವರು ನಾಟಕವಾಡುತ್ತಿದ್ದಾರೆ. ಬಿಜೆಪಿಯವರು ತುರ್ತು ಸಭೆ ಕರೆದಾಗ ಹೋಗಲಿಲ್ಲ, ನೀರಿನ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ಪಾಳೆಗಾರಿಕೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮಿಳುನಾಡಿಗೆ ಕಾವೇರಿ ನೀರು ಹರಿಯದಂತೆ ಎಚ್ಚರಿಕೆ ವಹಿಸಬೇಕಿತ್ತು. ಆದರೆ, ಎಚ್ಚರಿಕೆ ವಹಿಸದೇ ಬರದ ಪರಿಸ್ಥಿತಿಯಲ್ಲಿಯೂ ಸುಮ್ಮನಿದ್ದಾರೆ. ಕಾವೇರಿ ಪ್ರಾಧಿಕಾರವು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿನವರು ಮೇಕೆದಾಟು ವಿರೋಧ ಮಾಡುವುದನ್ನು ಕೂಡಲೇ ಕೈಬಿಡಿ. ಕಾವೇರಿ ನೀರಿಗಾಗಿ ಒತ್ತಾಯ ಮಾಡುವುದು ಸರಿಯಲ್ಲ. ಕಾವೇರಿ ಜಲಾಶಯಯದಲ್ಲಿ ನೀರಿದ್ದರೆ ನಾವೇ ಬಿಡುತ್ತೇವೆ. ಆದರೆ, ಬರಗಾಲ ಎದುರಾಗಿರುವುದರಿಂದ ನೀರು ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಬಹಿರಂಗವಾಗಿ ಕಾವೇರಿ ನೀರನ್ನು ಬಿಡಲು ಹೊರಟಿರುವುದು ತೀವ್ರ ಖಂಡನೀಯ. ಇದುವರೆವಿಗೂ ಬಿಟ್ಟಿರುವ ನೀರಿನ ವಿವರವನ್ನು ಪ್ರಾಮಾಣಿಕವಾಗಿ ಒದಗಿಸಬೇಕು. ನಮ್ಮ ರೈತರನ್ನು ಕಡೆಗಣಿಸಿ, ಯಾರಿಗೂ ಹೇಳದೇ ಕೇಳದೆ ಧಾರಾಳವಾಗಿ ನೀರು ಬಿಡಲಾಗಿದೆ ಎಂದು ಕಿಡಿಕಾರಿದರು.
ಸರ್ವಪಕ್ಷಗಳು ಕಾವೇರಿ ನೀರಿನ ವಿಚಾರವಾಗಿ ಒಳ್ಳೆಯ ತೀರ್ಮಾನ ಕೈಗೊಳ್ಳಬೇಕು. ಮೊದಲು ಬೆಂಗಳೂರಿನ ಜನರಿಗೆ ನೀರಿನ ಬವಣೆ ನೀಗಿಸಬೇಕು. ರೈತರು ಹಾಗೂ ಕಾವೇರಿ ಭಾಗದ ಜನರ ಹಿತಕಾಯಬೇಕು. ನಮ್ಮ ರೈತರು ಕಣ್ಣೀರಿನಲ್ಲಿ ಇರುವಾಗ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.
ರಾಜ್ಯ ಬಂದ್ ನಡೆಸಲಾಗುವುದು: ಕಾವೇರಿ ಜಲಾಯನ ಪ್ರದೇಶದಲ್ಲಿನ ಜಲಾಶಯಗಳು ಭರ್ತಿಯಾಗದೆ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸುವ ಮುಖಾಂತರ ನಮ್ಮ ರೈತರಿಗೆ ಅನ್ಯಾಯ ಮಾಡಿದೆ. ತಕ್ಷಣ ಕಾವೇರಿ ನೀರನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಪರ ಎಲ್ಲಾ ಸಂಘಟನೆಗಳು ಒಗ್ಗೂಡಿ ರಾಜ್ಯ ಬಂದ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ: ಇನ್ನೊಂದೆಡೆ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಆದೇಶದ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂಬ ಸ್ಪಷ್ಟ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಮಂಡ್ಯದಲ್ಲಿ (ಸೆಪ್ಟೆಂಬರ್ 14-2023) ರಸ್ತೆ ತಡೆ ನಡೆಸಿತ್ತು.
ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆಗೆ ಸೂಚನೆ: ಇಂದು ಸಿಎಂ ನೇತೃತ್ವದಲ್ಲಿ ತುರ್ತು ಸರ್ವಪಕ್ಷ ಸಭೆ