ಮೈಸೂರು : ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಮೈಸೂರು-ಬೆಂಗಳೂರು ರಸ್ತೆಯ ಸಿದ್ದಲಿಂಗಪುರ ಬಳಿ ರಸ್ತೆ ತಡೆ ನಡೆಸಲು ಮುಂದಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ವಾಟಾಳ್ ನಾಗರಾಜ್, ಡಿ.5ರಂದು ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ನಿಲ್ಲಿಸಬೇಕಾದರೆ ಮರಾಠಾ ಪ್ರಾಧಿಕಾರ ವಾಪಸ್ ಪಡೆಯಬೇಕು. ನ.30ರವರೆಗೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿದ್ದೇವೆ. ಪ್ರಾಧಿಕಾರ ವಾಪಸ್ ಪಡೆಯದೇ ಇದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ, ಗಡಿನಾಡು ಉದ್ಧಾರ ಮಾಡುತ್ತಿಲ್ಲ. ಆದರೆ, ಮರಾಠರ ಅಭಿವೃದ್ಧಿಗೆ ಪ್ರಾಧಿಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳರು, ಆಂಧ್ರದವರು, ಮಲೆಯಾಳಿಗಳು ಎಲ್ಲರೂ ಪ್ರಾಧಿಕಾರ ಕೇಳುತ್ತಾರೆ. ಅವರಿಗೂ ಪ್ರಾಧಿಕಾರ ಕೊಡುತ್ತಾರಾ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಬಸವಕಲ್ಯಾಣ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಮಾಡಿದ್ದಾರೆ. ಡಿ.5ರ ರಾಜ್ಯ ಬಂದ್ಗೆ 1,500 ಸಂಘಟನೆಗಳು ಬೆಂಬಲ ನೀಡಿವೆ. ಬಸ್ಸು, ಟ್ಯಾಕ್ಸಿ, ರೈಲು ಸೇರಿ ಎಲ್ಲಾ ಸೇವೆಯೂ ಬಂದ್ ಆಗಲಿವೆ ಎಂದು ವಾಟಾಳ್ ಹೇಳಿದರು.