ಮೈಸೂರು: ವರುಣಾ ಕ್ಷೇತ್ರದಿಂದ ತಂದೆ ಸ್ಪರ್ಧೆ ಮಾಡಿದರೆ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ವರುಣಾ ತಂದೆ ಪಾಲಿನ ಅದೃಷ್ಟದ ಕ್ಷೇತ್ರ ಎಂದು ಭವಿಷ್ಯ ನುಡಿದಿದ್ದ ಮಗ ಯತೀಂದ್ರ ಸಿದ್ದರಾಮಯ್ಯ ಮಾತು ಈಗ ನಿಜವಾಗಿದೆ. ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದು, ಮೂರು ಬಾರಿಯೂ ಸಹ ಅಧಿಕಾರ ಸಿಕ್ಕಿದೆ. ಈಗ ಮತ್ತೆ ವರುಣಾದಿಂದ ಆಯ್ಕೆಯಾಗಿ. ಮತ್ತೆ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ.
ಮಗನ ಮಾತು ನಿಜವಾಯಿತು: ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರ ಸೇರಿದಂತೆ ಹಲವು ಕಡೆ ಸ್ಪರ್ಧೆ ಮಾಡಲು ಕ್ಷೇತ್ರ ಹುಡುಕುತ್ತಿದ್ದಾಗ, ವರುಣಾ ಕ್ಷೇತ್ರದ ಶಾಸಕರಾಗಿದ್ದ ಮಗ ಯತೀಂದ್ರ ಸಿದ್ದರಾಮಯ್ಯ, ತಂದೆ ಈ ಬಾರಿ ವರುಣಾದಿಂದಲೇ ಸ್ಪರ್ಧೆ ಮಾಡಬೇಕು. ಅವರಿಗಾಗಿ ನಾನು ಕ್ಷೇತ್ರ ಬಿಡಲು ಸಿದ್ಧ, ತಂದೆ ವರುಣಾದಿಂದಲೇ ಸ್ಪರ್ಧೆ ಮಾಡಿದರೆ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ತಂದೆ ಪಾಲಿಗೆ ವರುಣಾ ಕ್ಷೇತ್ರ ಅದೃಷ್ಟದ ಕ್ಷೇತ್ರ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಇತಿಹಾಸ: 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆದಾಗ ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ಕ್ಷೇತ್ರದ ಕೆಲವು ಪ್ರದೇಶಗಳನ್ನು ಒಳಗೊಂಡು ರೂಪಿತವಾದ ಕ್ಷೇತ್ರವೇ ಈ ವರುಣಾ ಕ್ಷೇತ್ರವಾಗಿದ್ದು. ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ, ಮೊದಲ ಬಾರಿಗೆ 2008ರಲ್ಲಿ ಸ್ಪರ್ಧೆ ಮಾಡಿದ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದರು.
ಆ ಬಳಿಕ 2013ರಲ್ಲಿ ಮತ್ತೆ ಎರಡನೇ ಬಾರಿಗೆ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಕಾಂಗ್ರೆಸ್ಗೆ ಬಹುಮತ ಬಂದು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದ ಸಿದ್ದರಾಮಯ್ಯ, 5 ವರ್ಷ ಪೂರ್ಣಾವಧಿ ಅಧಿಕಾರ ಪೂರೈಸಿದ ನಂತರ ಮಗನ ಭವಿಷ್ಯಕ್ಕಾಗಿ ವರುಣಾ ಕ್ಷೇತ್ರವನ್ನು ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ 2023ರಲ್ಲಿ ಮತ್ತೆ ಮೂರನೇ ಬಾರಿಗೆ ವರುಣಾದಿಂದಲೇ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ. ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಪಾಲಿಗೆ ಗೆದ್ದಾಗಲೆಲ್ಲ ಅಧಿಕಾರ ಕೊಟ್ಟ ಅದೃಷ್ಟದ ಕ್ಷೇತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಗೆಲ್ಲಿಸಿದರೆ ರಾಜಕೀಯ ಶಕ್ತಿ ಬರುತ್ತದೆ ಎಂಬ ಮಾತು ಸಹ ನಿಜವಾಯಿತು: ಈ ಬಾರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದ ಸ್ಪರ್ಧೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದರು. ಚುನಾವಣೆಯ ಸಂದರ್ಭದಲ್ಲಿ 5 ದಿನಗಳ ಕಾಲ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ, ಪ್ರಚಾರದ ಸಂದರ್ಭದಲ್ಲಿ ಈ ಬಾರಿ ನನ್ನನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿದರೆ ನನಗೆ ರಾಜಕೀಯ ಶಕ್ತಿ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ 130 ರಿಂದ 150 ಸ್ಥಾನ ಗೆಲ್ಲಲಿದೆ. ನಾನು ಮತ್ತೊಮ್ಮೆ ರಾಜ್ಯದ ಅಧಿಕಾರ ಹಿಡಿಯಲಿದ್ದೇವೆ ಎಂದು ಸಿದ್ದರಾಮಯ್ಯ ಪ್ರಚಾರದ ಸಂದರ್ಭದಲ್ಲಿ ಹೇಳಿದ ಮಾತು ಸಹ ನಿಜವಾಗಿದೆ.
ಇದನ್ನೂ ಓದಿ: ತಲಾ ಎರಡು ಬಾರಿ ಡಿಸಿಎಂ, ಪ್ರತಿಪಕ್ಷ ನಾಯಕ, ಸಿಎಂ ಸ್ಥಾನ: ಅಪರೂಪದ ರಾಜಕಾರಣಿ ಸಿದ್ದರಾಮಯ್ಯ