ಮೈಸೂರು : ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿ, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. ಮೃತರನ್ನು ಕೂಡ್ಲಾಪುರದ ಸಚಿನ್, ಉತ್ತನಹಳ್ಳಿಯ ದೊರೆಸ್ವಾಮಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: ಮಡಿಕೇರಿ: ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವು
ನಂಜನಗೂಡಿನ ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮಕ್ಕೆ ಬೈಕ್‌ನಲ್ಲಿ ಮೂವರು ಯುವಕರು ಹೋಗುತ್ತಿದ್ದರು. ದೂರದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ್ದಾರೆ. ಪೊಲೀಸರನ್ನು ಕಂಡು ವಾಪಸ್ ಹಿಂದಕ್ಕೆ ಹೋಗಲು ಯೂಟರ್ನ್ ತೆಗೆದುಕೊಳ್ಳಲು ಯತ್ನಿಸಿದ್ದಾರೆ.
ಇದೇ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆಯಿತು. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.